ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯುವ ವಿಚಾರವಾಗಿ ಮತ್ತೆ ಹೋರಾಟ ಮಾಡುವ ಮುನ್ಸೂಚನೆಯನ್ನು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆದ ಮೇಲೆ ಹೋರಾಟ ಶಾಂತಸ್ವರೂಪ ಪಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಬೊಮ್ಮಾಯಿ ಅವರಿಗೆ ನಮ್ಮ ಸಮಾಜದ ಬಗ್ಗೆ ಗೌರವ ಇತ್ತು. ಭಯವೂ ಇತ್ತು. ಆದರೆ ಇವರಿಗೆ (ಸಿದ್ದರಾಮಯ್ಯ) ಏನು ಇಲ್ಲ. ಇವರನ್ನು ಕಂಡರೆ ನಾವು ಭಯ ಪಡುವಂತಹ ಪರಿಸ್ಥಿತಿ ಬಂದಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.
ಬೊಮ್ಮಾಯಿ ಅವರಿಗೆ ನಮ್ಮ ಜನಾಂಗದ ಮತದ ಬಗ್ಗೆ ಗೌರವ ಇತ್ತು. ಹಾಗಾಗಿ ನಾವು ಎಲ್ಲೇ ಕರೆದರೂ ಬರುತ್ತಿದ್ದರು ಮತ್ತು ಮಾತನಾಡುತ್ತಿದ್ದರು. ಈಗ ನಾನು ಸಿಎಂ ಅವರ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬಂದಿದೆ. ಅದು ಅನಿವಾರ್ಯವೂ ಆಗಿದೆ. ಆದರೆ ನಾವು ಹೋರಾಟದಲ್ಲಿ ಇರುವುದರಿಂದ ಎಷ್ಟೇ ಕಷ್ಟ ಆದರೂ ಹೋರಾಟ ಕೈ ಬಿಡಲ್ಲ. ನಮ್ಮ ಸಮಾಜದ ಶಾಸಕರ ಮೂಲಕವೂ ಸಿಎಂಗೆ ಒತ್ತಡ ಹಾಕಿಸುತ್ತೆವೆ. ಸಮಾಜದ ವಕೀಲರ ಮೂಲಕವೂ ಒತ್ತಡ ಹಾಕುತ್ತೇನೆ. ಯಾವುದೇ ಮುಖ್ಯಮಂತ್ರಿ ಇರಲಿ ಸ್ಪಂದನೆ ಮಾಡಲೇಬೇಕು ಎಂದರು.
ಯಾರೂ ಖಾಯಂ ಆಗಿ ಸಿಎಂ ಆಗಿರುವುದಿಲ್ಲ. ಈಗ ಇಲ್ಲದಿದ್ದರೂ ಮುಂದೆ ದೇವರು ಮೀಸಲಾತಿಗೆ ಸ್ಪಂದನೆ ಮಾಡುವಂತಹ ಒಳ್ಳೆಯ ಸಿಎಂ ರನ್ನು ಕೊಟ್ಟೆ ಕೊಡುತ್ತಾನೆ. ವಕೀಲರನ್ನು ನೋಡಿಯಾದರೂ ಸಿದ್ದರಾಮಯ್ಯ ಅವರ ಮನಸ್ಸು ಕರಗಿ ಮೀಸಲಾತಿ ಘೋಷಣೆ ಮಾಡಬಹುದು ಎಂದು ಅಂದುಕೊಂಡಿದ್ದೇವೆ. ಇದು ನಮ್ಮ ಏಳನೇ ಹಂತದ ಹೋರಾಟ. ಈ ಬಾರಿ ವಕೀಲರ ಮೂಲಕ ಪ್ರಯತ್ನ ಮಾಡುತ್ತಿದ್ದೇವೆ. ವಕೀಲರು ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಧ್ವನಿ ಜೋಡಿಸಿದರೆ ನಮಗೆ ಆನೆಬಲ ಬರುತ್ತದೆ. ಆಗಲಾದರೂ ಮುಖ್ಯಮಂತ್ರಿಗಳು ವಕೀಲರ ಮಾತಿಗೆ ಬೆಲೆ ಕೊಟ್ಟು ನಮಗೆ ನ್ಯಾಯ ಕೊಡಬಹುದು ಎನ್ನುವ ನಿರೀಕ್ಷೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ನಮ್ಮ ಸಮಾಜದ ವಕೀಲರು ಬೆಂಬಲ ಕೊಟ್ಟಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಸೆ.22ರಂದು ವಕೀಲರ ಮೂಲಕ ಹೋರಾಟ ಪ್ರಾರಂಭಿಸಿತ್ತೇವೆ. ಮೊದಲು ಬೆಳಗಾವಿಯ ಗಾಂಧಿ ಭವನದಲ್ಲಿ ಹೋರಾಟ ಮಾಡುತ್ತೇವೆ. ಸಿಎಂ ಕಾನೂನು ತಜ್ಞರ ಸಭೆ ಕರೆಯಲು ಅವರೇ ದಿನಾಂಕ ಘೋಷಣೆ ಮಾಡಬೇಕು. ಘೋಷಣೆ ಮಾಡಿದರೆ ಹೋರಾಟ ಕೈ ಬಿಡುತ್ತೇವೆ. ಇಲ್ಲದಿದ್ದರೆ ಘೋಷಣೆ ಮಾಡುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಸರ್ಕಾರಕ್ಕೆ ಹಾಗೂ ಸಿದ್ದರಾಮಯ್ಯ ಅವರಿಗೆ ಸೂಕ್ಷ್ಮ ಎಚ್ಚರಿಕೆ ನೀಡಿದರು.