ಹೊಸದಿಗಂತ ಡಿಜಿಟಲ್ ಡೆಸ್ಕ್;
ದೆಹಲಿಯ ರಾಜೇಂದ್ರ ನಗರ ದುರಂತದಲ್ಲಿ ಮೂವರು ಐಎಎಸ್ ಆಕಾಂಕ್ಷಿ ವಿದ್ಯಾರ್ಥಿಗಳನ್ನು ಸಾವನ್ನಪ್ಪಿದ್ದು, ಇಂದು ಘಟನಾ ಸ್ಥಳದಲ್ಲಿ ಬುಲ್ಡೋಜರ್‌ಗಳು ಘರ್ಜಿಸಿವೆ.
ಬೆಳ್ಳಂ ಬೆಳಗ್ಗೆ ಸ್ಥಳದಲ್ಲಿ ಬೀಡು ಬಿಟ್ಟಿರುವ ಬುಲ್ಡೋಜರ್‌ಗಳು ಬ್ಲಾಕ್ ಆಗಿರುವ ಚರಂಡಿಗಳ ಸ್ವಚ್ಛತಾ ಕಾರ್ಯಾಚರಣೆ ನಡೆಸಿವೆ. ಚರಂಡಿಗಳಿಗೆ ತಡೆಯಾಗಿದ್ದ ಸಿಮೆಂಟ್ ಇಟ್ಟಿಗೆಗಳನ್ನು ತೆರವುಗೊಳಿಸಿ ನೀರು ಹರಿಯಲು ಸುಗಮವಾಗುವಂತೆ ಮಾಡಿದೆ.
ಇನ್ನು ಘಟನೆ ಬೆನ್ನಲ್ಲೇ ಕಾರ್ಯಪ್ರವೃತವಾಗಿರುವ ದಿಲ್ಲಿ ನಗರ ಪಾಲಿಕೆ(MCD) ಬುಲ್ಡೋಜರ್‌ಗಳ ಸಹಾಯದಿಂದ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸಿ ಸಲೀಸಾಗಿ ನೀರು ಹರಿದು ಹೋಗುವಂತೆ ಮಾಡಿದೆ. ಇದಕ್ಕೂ ಮುನ್ನ ಅಕ್ರಮವಾಗಿ ನಿರ್ಮಿಸಿರುವ 13 ಕೋಚಿಂಗ್ ಸೆಂಟರ್‌ಗಳಿಗೆ MCD ಬೀಗ ಜಡಿದಿದೆ.
ದೆಹಲಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಐಎಎಸ್ ಕೋಚಿಂಗ್ ಸೆಂಟರ್‌ಗೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ರಾಜೇಂದ್ರ ನಗರದಲ್ಲಿರುವ ರಾವ್ ಐಎಎಸ್ ಕೋಚಿಂಗ್ ಸೆಂಟರ್ ನಲ್ಲಿ ಈ ದುರಂತ ಸಂಭವಿಸಿದೆ. ಶನಿವಾರ ಸಂಜೆ ಏಕಾಏಕಿ ನೀರು ನುಗ್ಗಿದ ಕಾರಣ ನೆಲಮಹಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಮೃತರನ್ನು ಐಎಎಎಸ್ ಆಕಾಂಕ್ಷಿಗಳಾದ ತೆಲಂಗಾಣ, ಉತ್ತರ ಪ್ರದೇಶ ಮತ್ತು ಕೇರಳ ಮೂಲದ ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಮತ್ತು ನವೀನ್ ಡೆಲ್ವಿನ್ (28) ಎಂದು ಗುರುತಿಸಲಾಗಿದೆ.