ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಇನ್ನೇನು ಹತ್ತಿರ ಬರುತ್ತಿದೆ. ರಾಜಕೀಯ ಬಣದಲ್ಲಿ ರಣತಂತ್ರಗಳು ಹೆಚ್ಚಾಗಿವೆ. ಯಾರು ಎಷ್ಟು ಸ್ಥಾನ ಗೆಲ್ಲಬೇಕು ಅನ್ನೋ ಲೆಕ್ಕಾಚಾರ ಈಗಾಗಲೇ ಸಾಕಷ್ಟು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ಇದೀಗ ಒಂದೇ ಒಂದು ಕ್ಷೇತ್ರದ ಮೇಲೆ ಮೂರು ಪಕ್ಷಗಳ ಕಣ್ಣು ಬಿದ್ದಿದೆ. ಅಷ್ಟಕ್ಕೂ ಯಾವುದು ಆ ಕ್ಷೇತ್ರ? ಆ ಕ್ಷೇತ್ರದ ಅಧಿಪತಿ ಯಾರು?
ಜೆಡಿಎಸ್, ಬಿಜೆಪಿ, ಕಾಂಗ್ರೆಸ್ 3 ಪಕ್ಷಗಳು ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟಿವೆ. ಸಕ್ಕರೆ ನಾಡಿಗಾಗಿ ಜೆಡಿಎಸ್ ಬೇಡಿಕೆ ಇಟ್ಟರೆ. ಅತ್ತ ಸುಮಲತಾ ಮೋದಿ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಇನ್ನು ಇದೇ ವೇಳೆ ಮಂಡ್ಯದಲ್ಲಿ ನಿಖಿಲ್ ಸ್ಪರ್ಧಿಸುತ್ತಾರೆ ಎಂಬ ಸಂಚಲನ ಸೃಷ್ಟಿಯಾಗಿದೆ.
ಭಾರಿ ಕುತೂಹಲ ಸೃಷ್ಟಿಸಿರುವ ಮಂಡ್ಯ ಕ್ಷೇತ್ರಕ್ಕೆ ಯಾರಾಗಲಿದ್ದಾರೆ ಅಧಿಪತಿ ಎಂಬ ಪ್ರಶ್ನೆ ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಳಿಕ ಈ ಗೊಂದಲ ಮತ್ತಷ್ಟು ತಿರುವು ಪಡೆದುಕೊಂಡಿದೆ. ಈ ಸೆಣೆಸಾಟದಲ್ಲಿ ಯಾವ ಬಣ ಗೆದ್ದು ಮಂಡ್ಯದ ಅಧಿಪತಿ ಆಗ್ತಾರೆ ಎಂಬುದೇ ಸದ್ಯದ ಯಕ್ಷಪ್ರಶ್ನೆ.
ಈಗಾಗಲೇ ನಿಖಿಲ್ ಮಂಡ್ಯದಿಂದ ಸ್ಪರ್ದಿಸಲೇ ಬೇಕು ಎಂದು ಜೆಡಿಎಸ್ ವರಿಷ್ಠರ ಒಮ್ಮತವಾಗಿದೆ. ಆದರೆ ನಿಖಿಲ್ ಮಾತ್ರ ನಾನು ಈ ಕ್ಷೇತ್ರದ ಆಕಾಂಕ್ಷಿ ಅಲ್ಲ ಎಂದು ಹೇಳಿದ್ದಾರೆ. ಇನ್ನು ಸುಮಲತಾ ಅವರು ಮಂಡ್ಯದಿಂದ ಕಣಕ್ಕಿಳಿಯಲು ಎಲ್ಲಾ ರೀತಿಯ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಕೂಡ ಈ ಕ್ಷೇತ್ರದಲ್ಲಿ ತನ್ನ ಆಡಳಿತ ನಡೆಸಲು ತಯಾರಿ ನಡೆಸುತ್ತಿದೆ.
ಈ ಗೊಂದಲಗಳಿಗೆ ಉತ್ತರ ಇನ್ನೇನು ಕೆಲವೇ ತಿಂಗಳಲ್ಲಿ ಹೊರಬೀಳಲಿದೆ. ಮಂಡ್ಯ ಕ್ಷೇತ್ರ ಗೆದ್ದು ಯಾರು ಅಧಿಪತಿ ಆಗ್ತಾರೆ ಅನ್ನೋದನ್ನ ನಾವು ನೀವು ಕಾದು ನೋಡಬೇಕಿದೆ.