March 11, 2026
Wednesday, March 11, 2026
spot_img

30 ಲಕ್ಷ ರೂ. ಚಿನ್ನದ ಆಸೆಗೆ ಬಲಿಯಾದಳೇ ವಿವಾಹಿತೆ? ಪೊಲೀಸರಿಗೆ ಸವಾಲಾದ ‘ಮಿಸ್ಸಿಂಗ್’ ಕೇಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆ ಸಮಾರಂಭಕ್ಕೆಂದು ಹೋದ ಮಹಿಳೆಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿ, ಇದೀಗ ಅವಳ ಒಳ ಉಡುಪು ಮತ್ತು ಬ್ಯಾಗ್ ಹಾಸನ ಜಿಲ್ಲೆಯ ಕಲ್ಕೆರೆ ಬಳಿ ಪತ್ತೆಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇದು ಕೊಲೆಯೋ ಅಥವಾ ಅಪಹರಣವೋ ಎಂಬ ಸಂಶಯ ದಟ್ಟವಾಗಿದ್ದು, ಕೆರೆಯಲ್ಲಿ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಯಲಿಯೂರು ಗ್ರಾಮದ ರುದ್ರೇಶ್ ಎಂಬುವವರ ಪತ್ನಿ ಪ್ರಿಯಾಂಕ (29) ನಾಪತ್ತೆಯಾದ ದುರ್ದೈವಿ. ಮೂಲತಃ ಬೇಲೂರು ತಾಲೂಕಿನ ಮತ್ತಾವರ ಗ್ರಾಮದವರಾದ ಪ್ರಿಯಾಂಕ, ಫೆಬ್ರವರಿ 12ರಂದು ಚಿಕ್ಕಮಗಳೂರಿನಲ್ಲಿ ನಡೆದ ಮದುವೆಗೆ ತೆರಳಿದ್ದರು. ಮದುವೆ ಮುಗಿಸಿ ತವರು ಮನೆಗೆ ಭೇಟಿ ನೀಡಿದ್ದ ಅವರು, ಅಲ್ಲಿಂದ ಬೇಲೂರಿಗೆ ಬಸ್ ಹತ್ತಿದ್ದರು.

ಬೇಲೂರಿನಲ್ಲಿ ಬಸ್ ಇಳಿದ ಪ್ರಿಯಾಂಕ, ತನ್ನ ಪತಿಗೆ ಕರೆ ಮಾಡಿ “ಕುಣಿಗಲ್‌ಗೆ ಬರುತ್ತೇನೆ, ಅಲ್ಲಿಗೆ ಬಂದು ಕರೆದುಕೊಂಡು ಹೋಗಿ” ಎಂದು ತಿಳಿಸಿದ್ದರು. ತದನಂತರ ತನ್ನ ಚಿಕ್ಕಮ್ಮ ಸೌಮ್ಯಾ ಅವರಿಗೆ ಕರೆ ಮಾಡಿ, “ಪರಿಚಯಸ್ಥರು ಸಿಕ್ಕಿದ್ದಾರೆ, ಅವರ ಜೊತೆ ಹೋಗುತ್ತಿದ್ದೇನೆ” ಎಂದು ಹೇಳಿದ್ದರು. ಆದರೆ ಅಂದು ರಾತ್ರಿ 8:30ರ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಪತಿ ರುದ್ರೇಶ್ ಕುಣಿಗಲ್‌ನಲ್ಲಿ ಕಾಯುತ್ತಿದ್ದರೂ ಪತ್ನಿ ಬಾರದಿದ್ದಾಗ ಆತಂಕಗೊಂಡು ಪೊಲೀಸರ ಮೊರೆ ಹೋಗಿದ್ದಾರೆ.

ಶನಿವಾರ ಬೆಳಿಗ್ಗೆ ಕಲ್ಕೆರೆ ಗ್ರಾಮದ ಬಳಿ ಶೋಧ ನಡೆಸಿದಾಗ ಪ್ರಿಯಾಂಕ ಅವರ ಒಳವಸ್ತ್ರ, ಒಂದು ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಅಸ್ತವ್ಯಸ್ತವಾಗಿ ಬಿದ್ದಿರುವುದು ಕಂಡುಬಂದಿದೆ. ಪ್ರಿಯಾಂಕ ಮೈಮೇಲೆ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದವು (ನೆಕ್ಲೆಸ್, ಸರ, ಉಂಗುರ). ಈ ಒಡವೆಗಳ ಆಸೆಗೆ ಯಾರೋ ಪರಿಚಯಸ್ಥರೇ ಆಕೆಯನ್ನು ಅಪಹರಿಸಿ, ಕೊಲೆ ಮಾಡಿ ಕೆರೆಗೆ ಎಸೆದಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶುಭನಿತ್ವಾ, ಸೋಕೋ ತಂಡ ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಕಲ್ಕೆರೆ ಕೆರೆಯಲ್ಲಿ ಶವವಿರಬಹುದು ಎಂಬ ಅನುಮಾನದ ಮೇಲೆ ಡ್ರೋನ್ ಕ್ಯಾಮೆರಾಗಳ ಮೂಲಕ ತೀವ್ರ ಶೋಧ ನಡೆಸಲಾಗುತ್ತಿದೆ. ಪ್ರಿಯಾಂಕ ಅವರ ಮೊಬೈಲ್ ಲೊಕೇಶನ್ ಕಡೆಯದಾಗಿ ಕಲ್ಕೆರೆ ಸಮೀಪವೇ ತೋರಿಸುತ್ತಿದ್ದು, ಆ ಮಾರ್ಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ.

ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ನಾಪತ್ತೆಯ ಹಿಂದಿನ ಅಸಲಿ ರಹಸ್ಯ ಭೇದಿಸಲು ಪೊಲೀಸರು ಕಸರತ್ತು ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !