ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೀನ್ಯಾ ಮತ್ತು ಸೊಮಾಲಿಯಾ ದೇಶಗಳಲ್ಲಿ ಭಾರಿ ಮಳೆಯಾದ ಪರಿಣಾಮ ಪ್ರವಾಹ ಸೃಷ್ಟಿಯಾಗಿದೆ. ಈ ಪ್ರವಾಹಕ್ಕೆ 30ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದು, ಹತ್ತು ಸಾವಿರ ಮಂದಿ ಸ್ಥಳಾಂತರಗೊಂಡಿದ್ದಾರೆ ಎಂದು ಪರಿಹಾರ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗಳು ಹೇಳಿವೆ.
ಸೊಮಾಲಿಯಾದಲ್ಲಿ ಭಾರೀ ಮಳೆಯಾದ ಕಾರಣ 14 ಮಂದಿ ಮೃತಪಟ್ಟ ಬಳಿಕ ಮತ್ತು ಪ್ರವಾಹದಿಂದಾಗಿ ಮನೆಗಳು, ರಸ್ತೆಗಳು ಮತ್ತು ಸೇತುವೆಗಳು ಹಾಳಾದ ಹಿನ್ನೆಲೆ ಅಲ್ಲಿನ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.
ದಕ್ಷಿಣ ಸೊಮಾಲಿಯಾದ ಜುಬಾಲ್ಯಾಂಡ್ ರಾಜ್ಯದ ಲುಕ್ ಜಿಲ್ಲೆಯಲ್ಲಿ 2,400 ನಿವಾಸಿಗಳು ಪ್ರವಾಹದಲ್ಲಿ ಸಿಲುಕಿದ್ದು, ತುರ್ತು ಮತ್ತು ರಕ್ಷಣಾ ಕಾರ್ಯಾಚರಣೆ ತಂಡಗಳು ಅವರನ್ನು ತಲುಪಲು ಪ್ರಯತ್ನಿಸುತ್ತಿವೆ.
ಜುಬಾ ಮತ್ತು ಶಾಬೆಲ್ಲೆ ನದಿಗಳ ಉದ್ದಕ್ಕೂ ಪ್ರವಾಹದ ಹೆಚ್ಚಿನ ಅಪಾಯದ ಬಗ್ಗೆ ವಿಶ್ವಸಂಸ್ಥೆಯ ಕಚೇರಿ ಎಚ್ಚರಿಸಿದೆ. ಜುಬಾ ನಟಿ ತಟದಲ್ಲಿ ವಾಸಿಸುತ್ತಿರುವ ಜನರನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು ಕರೆ ನೀಡಿದೆ.
ಸತತ ನಾಲ್ಕು ವರ್ಷಗಳ ಬರಗಾಲದ ನಂತರ ಸೊಮಾಲಿಯಾದಲ್ಲಿ ಭೀಕರ ಪ್ರವಾಹ ಮತ್ತೆ ಜನರನ್ನು ಸಂಕಷ್ಟಕ್ಕೀಡು ಮಾಡಿದೆ.
ನೆರೆಯ ಕೀನ್ಯಾದಲ್ಲಿ, ಶುಕ್ರವಾರ ಆರಂಭವಾದ ಭಾರೀ ಮಳೆಯಿಂದ ಮೃತರ ಸಂಖ್ಯೆ 15ಕ್ಕೆ ಏರಿದೆ ಎಂದು ಕೀನ್ಯಾದ ರೆಡ್‌ಕ್ರಾಸ್ ಘಟಕ ಹೇಳಿದೆ. ಬಂದರು ನಗರ ಮೊಂಬಾಸಾ ಮತ್ತು ಈಶಾನ್ಯ ಕೌಂಟಿಗಳಾದ ಮಂಡೆರಾ ಮತ್ತು ವಾಜಿರ್‌ಗಳಲ್ಲಿ ಹೆಚ್ಚು ಪರಿಣಾಮ ಬೀರಿದೆ.
ಹಠಾತ್ ಪ್ರವಾಹದಲ್ಲಿ 241 ಎಕರೆ ಕೃಷಿ ಭೂಮಿ ನಾಶವಾಗಿದ್ದು, 1,067 ಜಾನುವಾರು ಸಾವಿಗೀಡಾಗಿವೆ ಎಂದು ರೆಡ್ ಕ್ರಾಸ್ ಸಂಸ್ಥೆ ವರದಿ ಮಾಡಿದೆ.