ಹೊಸ ದಿಗಂತ ವರದಿ, ಬೀದರ:
ಹುಮನಾಬಾದ್ ಧುಮ್ಮನಸೂರ ಮಾರ್ಗವಾಗಿ ದುಬಲಗುಂಡಿ ಕ್ರಾಸ್ ಹತ್ತಿರ ಹೊಸದಾಗಿ ನಿರ್ಮಿಸುತ್ತಿರುವ ರಸ್ತೆಯ ಓವರ ಬ್ರಿಡ್ಜ್ ಹತ್ತಿರ ಗಾಂಜಾವನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಾಹನ ಸಂಖ್ಯೆ ಎಮ್.ಹೆಚ್-14/ಬಿ.ಸಿ.2939ರ ಕಾರಿನ ಮೇಲೆ ದಾಳಿ ಮಾಡಿ 171 ಪಾಕೇಟಗಳು ಒಟ್ಟು 342 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಸ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಫೆಬ್ರವರಿ 2ರಂದು ಪತ್ರಿಕಾಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಅವರು, ಗಾಂಜಾವನ್ನು ಸಾಗಿಸುತ್ತಿದ್ದ 4 ಜನ ಆರೋಪಿಗಳಲ್ಲಿ ಒಬ್ಬ ಆರೋಪಿಯು ಸಿಕ್ಕಿದ್ದು, ದಸ್ತಿಗಿರ್ ಮಾಡಿ ಆರೋಪಿ ವಿರುದ್ಧ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿರುತ್ತದೆ. ಸದರಿ ಈ ಪ್ರಕರಣದಲ್ಲಿ 34,20,000 ರೂ. ಬೆಲೆಬಾಳುವ ಗಾಂಜಾ ಮತ್ತು ಒಂದು ಕಾರ್ ಅಂದಾಜು ಕಿಮ್ಮತ್ತು 6,00,000 ರೂ. ಬೆಲೆಬಾಳುವ ವಾಹನ ಹೀಗೆ ಒಟ್ಟು 40,20,000 ರೂ. ಬೆಲೆಬಾಳುವ ಮಾಲು ಜಪ್ತಿ ಮಾಡಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಘಟನೆ ಹಿನ್ನೆಲೆ: ದಿನಾಂ 30-01-2022 ರಂದು ತಮ್ಮ ಹಾಗೂ ಹೆಚ್ಚುವರಿ ಪಪೊಲೀಸ್ ಅಧೀಕ್ಷಕರಾದ ಗೋಪಾಲ್ ಎಮ್.ಬ್ಯಾಕೋಡ್, ಹುಮನಾಬಾದ ಪೊಲೀಸ್ ಉಪಾಧೀಕ್ಷಕರಾದ ಡಾ.ಸೋಮಲಿಂಗ ಬಿ.ಕುಂಬಾರ ಅವರ ಮಾರ್ಗದರ್ಶನದಲ್ಲಿ ಮಲ್ಲಿಕಾರ್ಜುನ ಸಿ.ಪಿ.ಐ.ಹುಮನಾಬಾದ್ ವೃತ್ತ, ಹುಮನಾಬಾದ್ ಪೊಲೀಸ್ ಠಾಣೆಯ ಸಿಬ್ಬಂದಿ ಭಗವಾನ ಸಿ.ಹೆಚ್.ಸಿ.881, ದೀಪಕ ಸಿ.ಹೆಚ್.ಸಿ.977, ಸಂಜೀವಕುಮಾರ ಸಿಪಿಸಿ 1848, ಶಿವಾನಂದ ಸಿಪಿಸಿ 165 ಮತ್ತು ವಾಹನ ಚಾಲಕ ವಿವೇಕಾನಂದ ಎಪಿಸಿ 513 ಅವರು ಹಾಗೂ ಪಂಚರೊಂದಿಗೆ ಖಚಿತ ಮಾಹಿತಿ ಮೇರೆಗೆ ದುಬಲಗುಂಡಿ ಕ್ರಾಸ್ ಹತ್ತಿರದ ಓವರ ಬ್ರಿಡ್ಜ್ ಹತ್ತಿರ ಗಾಂಜಾವನ್ನು ಸಾಗಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿ ಗಾಂಜಾ ಪತ್ತೆ ಹಚ್ಚಲಾಗಿತ್ತು.
ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ: ಈ ಗಾಂಜಾ ಜಪ್ತಿ ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವು ಶ್ಲಾಘನೀಯವಾಗಿದೆ ಎಂದು ಇದೆ ವೇಳೆ ಡೆಕ್ಕಾ ಕಿಶೋರ ಬಾಬು ಅವರು ಅಭಿನಂದನೆ ಸಲ್ಲಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಗೋಪಾಲ್ ಎಮ್.ಬ್ಯಾಕೋಡ್ ಹಾಗೂ ಇನ್ನಿತರರು ಇದ್ದರು.