ಹೊಸದಿಗಂತ ವರದಿ, ಕಲಬುರಗಿ:
ಕಾಂತಾರ ಚಲನಚಿತ್ರದ ಖ್ಯಾತ ನಟ, ನಿದೇ೯ಶಕ ರಿಷಬ್ ಶೆಟ್ಟಿ ಅವರಿಗೆ ಡಿ 2ರಂದು ನಡೆಯಲಿರುವ ಶ್ರೀ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳ 38ನೇ ಗುರುವಂದನ ಮಹೋತ್ಸವದಲ್ಲಿ ರಾಷ್ಟ್ರ ಮಟ್ಟದ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಗುರುವಂದನ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ತಿಳಿಸಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಡಿ 1ರಂದು 38ನೆಯ ಗುರುವಂದನ ಮಹೋತ್ಸವವನ್ನು ಸಾಂಕೇತಿಕವಾಗಿ ಶ್ರೀಮಠದ ಗೋ-ಶಾಲೆಯಲ್ಲಿ 38 ಗೋಮಾತೆಗಳ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಪರಿಸರ ಪ್ರೇಮಿ ಪೂಜ್ಯರು 5000 ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದ ನಿರೂಪಣೆಯನ್ನು ಅನುಶ್ರೀ ಮಾಡಲಿದ್ದು, ಖ್ಯಾತ ಸಾಹಿತಗಳಾದ ವಿ. ನಾಗೇಂದ್ರ ಪ್ರಸಾದ ಮತ್ತು ಡಾ. ಶಿವಶಂಕರಪ್ಪ ಸಾಹುಕಾರ, ಕೆ.ಪಿ.ಎಸ್.ಸಿ ಚೇರ್ಮನ್ ರವರಿಗೆ ವಿಶೇಷ ಗೌರವ ಸನ್ಮಾನ ಮಾಡಲಾಗುವುದು.
ಸಂಜೆ ಖ್ಯಾತ ಹಿನ್ನಲೆ ಗಾಯಕರಾದ ವಿಜಯ ಪ್ರಕಾಶ ತಂಡದಿಂದ ಸ್ವರ ಸಂಗೀತ ಸಂಭ್ರಮ ಹಾಗೂ ಗುರುವಂದನ ಮಹೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ವಿಶೇಷ ಪ್ರತಿಭೆಗಳು ಸಮಾರಂಭದಲ್ಲಿ ಭಾಗವಹಿಸಲಿದ್ದು, ಈ ಮಹೋತ್ಸವದಲ್ಲಿ ಹರ-ಗುರು-ಚರ ಮೂರ್ತಿಗಳು ರಾಜಕೀಯ ಧುರೀಣರು ಉಪಸ್ಥಿತರಿರಲಿದ್ದು, ಐದು ರಾಜ್ಯಗಳಿಂದ 1,50,000 ಕ್ಕಿಂತಲೂ ಅಧಿಕ ಭಕ್ತರು ಪಾಲ್ಗೊಳ್ಳುವರು ಎಂದು ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷ ಶ್ರೀ ವೀರ ಮಹಾಂತ ಶಿವಾಚಾರ್ಯರು,ಮುಖಂಡ ಅಲ್ಲಂಪ್ರಭು ಪಾಟೀಲ್, ಸಾಗರ ಬಿರಾದಾರ, ಶರಣು ಇದ್ದರು.