INDW vs AUSW: ಎಲಿಸ್ಸಾ ಪೆರಿ ಅಬ್ಬರ: ಹರ್ಮನ್‌ ಪ್ರೀತ್‌ ಪಡೆಗೆ 2ನೇ ಸೋಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಂಬೈನ ಬ್ರೆಬೋರ್ನ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಆಸಿಸ್ ವನಿತೆಯರು 21 ರನ್‌ಗಳ ಜಯವನ್ನು ದಾಖಲಿಸುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದಾರೆ.
ತೃತೀಯ ಟಿ20 ಯಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾ ಪರ ಎಲಿಸ್ಸಾ ಪೆರಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಸ್ಫೋಟಕ ಆಟವಾಡಿದ ಪೆರಿ 47 ಎಸೆತಗಳಲ್ಲಿ 9 ಫೋರ್, 3 ಸಿಕ್ಸರ್​ನೊಂದಿಗೆ 75 ರನ್ ಚಚ್ಚಿದರೆ, ಮತ್ತೊರ್ವ ಆಟಗಾರ್ತಿ ಗ್ರಾನ್ಸ್ ಹ್ಯಾರಿಸ್ ಕೇವಲ 18 ಎಸೆತಗಳಲ್ಲಿ 4 ಫೋರ್, 3 ಸಿಕ್ಸರ್​ನೊಂದಿಗೆ 41 ರನ್ ಸಿಡಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು. ಭಾರತ ಪರ ರೇಣುಕಾ ಸಿಂಗ್, ಅಂಜಲಿ, ದೀಪ್ತಿ ಹಾಗೂ ದೇವಿಕಾ ತಲಾ 2 ವಿಕೆಟ್ ಪಡೆದರು.
173 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ಶಫಾಲಿ ವರ್ಮಾ (41 ಎಸೆತಗಳಲ್ಲಿ 52) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (27 ಎಸೆತಗಳಲ್ಲಿ 37) ಭರ್ಜರಿ ಮೂಲಕ 2 ವಿಕೆಟ್‌ಗೆ 106 ರನ್ ಗಳಿಸಿ ಕ್ರೂಸ್ ಕಂಟ್ರೋಲ್ ಮೋಡ್‌ನಲ್ಲಿತ್ತು. ಇವರಿಬ್ಬರು ಕೇವಲ 8.4 ಓವರ್‌ಗಳಲ್ಲಿ 73 ರನ್ ಸೇರಿಸಿದ್ದರು. ಆದರೆ ಶಫಾಲಿ ಮಿಡ್-ವಿಕೆಟ್ ಬೌಂಡರಿಯಲ್ಲಿ ಕ್ಯಾಚ್‌ ನೀಡಿ ಔಟಾದ ನಂತರ, ಭಾರತವು ಮೂರು ಓವರ್‌ಗಳಲ್ಲಿ 17 ರನ್‌ ಸೇರಿಸಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಪಂದ್ಯವು ಆಸ್ಟ್ರೇಲಿಯಾ ಪರ ತಿರುಗಿತು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 151 ರನ್‌ಗಳಿಗೆ ಸೀಮಿತವಾಯಿತು.
ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್ ಮತ್ತು ಗಾರ್ಡನರ್ ತಲಾ 2 ವಿಕೆಟ್ ಪಡೆದರೆ ಮೆಗನ್ ಸ್ಕಟ್ ಹಾಗೂ ನಿಕೋಲ ಕರೆ ತಲಾ 1 ವಿಕೆಟ್ ಪಡೆದರು. ಎಲಿಸ್ಸಾ ಪೆರಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ನಾಲ್ಕನೇ ಟಿ20 ಪಂದ್ಯ ಬ್ರಬೌರ್ನ್ ಸ್ಟೇಡಿಯಂನಲ್ಲಿ ಡಿಸೆಂಬರ್ 17 ರಂದು ನಡೆಯಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!