ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 4-0 ಅಂತರದಿಂದ ಹೀನಾಯವಾಗಿ ಸರಣಿ ಸೋತಿದೆ. ಕನಿಷ್ಠ ಒಂದು ಪಂದ್ಯವನ್ನೂ ಗೆಲ್ಲಲಾಗದ ಭಾರತ ತಂಡ ಬರಿಗೈಲಿ ತಾಯ್ನಾಡಿಗೆ ಮರಳುತ್ತಿದೆ. ಈ ಸೋಲಿನೊಂದಿಗೆ ನಾಯಕ ಶ್ರೇಯಸ್ ಅಯ್ಯರ್ ಸತತ 6 ಪಂದ್ಯಗಳಲ್ಲಿ ಸೋತ ನಾಯಕ ಎಂಬ ಬೇಡದ ದಾಖಲೆಗೆ ಪಾತ್ರರಾಗಿದ್ದಾರೆ. ಐರ್ಲೆಂಡ್ ಸರಣಿಯಲ್ಲೂ ಮುಗ್ಗರಿಸಿದ್ದ ಭಾರತ, ಇಂಗ್ಲೆಂಡ್‌ನಲ್ಲೂ ಅದೇ ಪ್ರದರ್ಶನ ಮುಂದುವರಿಸಿದೆ. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 257 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ 201 ರನ್‌ಗಳಷ್ಟೇ ಗಳಿಸಿ, 56 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಬಟ್ಲರ್-ಬ್ರೂಕ್ ಬ್ಯಾಟಿಂಗ್ ಅಬ್ಬರ
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ಗೆ ಫಿಲ್ ಸಾಲ್ಟ್ (6) ವಿಕೆಟ್ ಬೇಗ ಉರುಳಿದರೂ ಆರಂಭಿಕ ಆಘಾತ ಕಾಡಲಿಲ್ಲ. ಜೋಸ್ ಬಟ್ಲರ್ (131 ರನ್, 64 ಎಸೆತ, 12 ಬೌಂಡರಿ, 8 ಸಿಕ್ಸರ್) ಶತಕದ ಅಬ್ಬರ ಹಾಗೂ ನಾಯಕ ಹ್ಯಾರಿ ಬ್ರೂಕ್ (ಅಜೇಯ 95 ರನ್, 19 ಎಸೆತಗಳಲ್ಲಿ ಫಿಫ್ಟಿ) ಅವರ ಸ್ಫೋಟಕ ಆಟದ ನೆರವಿನಿಂದ 2ನೇ ವಿಕೆಟ್‌ಗೆ 233 ರನ್‌ಗಳ ಬೃಹತ್ ಜೊತೆಯಾಟ ದಾಖಲಾಗಿ, ಇಂಗ್ಲೆಂಡ್ ದಾಖಲೆಯ ಸ್ಕೋರ್ ಕಲೆಹಾಕಿತು.
ವಿಫಲವಾದ ಭಾರತದ ಬ್ಯಾಟಿಂಗ್ ಹೋರಾಟ
ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಅಭಿಷೇಕ್ ಶರ್ಮಾ (3) ಮತ್ತು ಸಂಜು ಸ್ಯಾಮ್ಸನ್ (27) ನಿರಾಸೆ ಮೂಡಿಸಿದರು. ಕ್ಯಾಪ್ಟನ್ ಶ್ರೇಯಸ್ ಅಯ್ಯರ್ (28) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇಶಾನ್ ಕಿಶನ್ (56 ರನ್, 35 ಎಸೆತ) ಹಾಗೂ ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ (53 ರನ್, 24 ಎಸೆತ, 4 ಸಿಕ್ಸರ್) ಅರ್ಧಶತಕ ಗಳಿಸಿ ಹೋರಾಡಿದರೂ, ರನ್ ರೇಟ್ ಒತ್ತಡದಿಂದಾಗಿ ಭಾರತ 8 ವಿಕೆಟ್‌ಗೆ 201 ರನ್ ಗಳಿಸಲಷ್ಟೇ ಶಕ್ತವಾಯಿತು. ಶಿವಂ ದುಬೆ (14), ಸೂರ್ಯಾಂಶ್ (7) ಹಾಗೂ ಅಕ್ಷರ್ ಪಟೇಲ್ (3) ಅಲ್ಪ ಮೊತ್ತಕ್ಕೆ ಔಟಾದರು. ಜೋಶ್ ಟಾಂಗ್ ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.



