ಹೊಸದಿಗಂತ ವರದಿ,ತುಮಕೂರು:
ಪಾವಗಡ ತಾಲೂಕಿನ ಕೋಣನಕುರಿಕೆ ಗ್ರಾಮದಲ್ಲಿನ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನದ ಬಿಸಿಯೂಟದ ನಂತರ ಚಿಕ್ಕಿ ಮೊಟ್ಟೆಯನ್ನು ಸೇವಿಸಿದ ಕೆಲವೇ ಕ್ಷಣದಲ್ಲಿ ಕೆಲ ಮಕ್ಕಳಿಗೆ ವಾಂತಿ , ಸುಸ್ತು ಕಾಣಿಸಿಕೊಂಡಿದ್ದು ತಕ್ಷಣ ಎಚ್ಚೆತ್ತುಕೊಂಡ ಶಿಕ್ಷಕರು ಮತ್ತು ಗ್ರಾಮಸ್ಥರು ಕೂಡಲೇ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ 40 ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.
ವಿಷಯ ತಿಳಿದ ತಹಶೀಲ್ದಾರ್ ವರದರಾಜು, ಕಾರ್ಯನಿರ್ವಾಹಣಾಧಿಕಾರಿ ಜಾನಕಿರಾಮ್, ಶಿಕ್ಷಣಾಧಿಕಾರಿಗಳಾದ ಇಂದ್ರಾಣಮ್ಮ, ಅಕ್ಷರ ದಾಸೋಹ ನಿರ್ದೇಶಕರು, ಮತ್ತು ಬಿ.ಆರ್. ಸಿ ಗಳು ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ, ವೈದ್ಯರರಿಂದ ಮಾಹಿತಿ ಪಡೆದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ತಹಶೀಲ್ದಾರ್ ವರದರಾಜು, ಮಕ್ಕಳು ಯಾವುದೇ ರೀತಿಯಲ್ಲಿ ತೊಂದರೆ ಇಲ್ಲ , ಪೋಷಕರು ಭಯಪಡುವ ಅಗತ್ಯವಿಲ್ಲ. ಊಟ ಸೇವಿಸಿದ ನಂತರ ಕೆಲ ಮಕ್ಕಳು ವಾಂತಿ ಮಾಡಿಕೊಂಡಿದ್ದು ಅದನ್ನು ಕಂಡು ಉಳಿದ ಮಕ್ಕಳು ಆತಂಕಕ್ಕೊಳಗಾಗಿದ್ದಾರೆ . ಎಲ್ಲಾ ಮಕ್ಕಳನ್ನು ವೈದ್ಯರು ಪರೀಕ್ಷಿಸಿದ್ದಾರೆ, ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು .
ಆರೋಗ್ಯ ವೈದ್ಯಾಧಿಕಾರಿ ಬಾಬು ಮಾತನಾಡಿ, ಕೋಣನಕುರಿಕೆ ಶಿಕ್ಷಕರು ನಮಗೆ ಕರೆ ಮಾಡಿ ನಮ್ಮ ಶಾಲೆಯಲ್ಲಿ ಮಕ್ಕಳು ಅಸ್ವಸ್ಥಗೊಂಡಿದ್ದಾರೆಂದು ತಿಳಿಸಿದರು .ಅವರನ್ನು ಕರೆ ತರುತ್ತಿದ್ದೇವೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಿಳಿಸಿದ ಕೂಡಲೇ ಎಚ್ಚೆತ್ತುಕೊಂಡು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೆವು. ಕೆಲ ಮಕ್ಕಳಿಗೆ ಮಾತ್ರ ವಾಂತಿ ಆಗಿ ಸುಸ್ತಾಗಿದ್ದಾರೆ. ಬೇರೆ ಎಲ್ಲ ಮಕ್ಕಳು ಚೆನ್ನಾಗಿದ್ದರೆ ಮುಂಜಾಗ್ರತೆಯಾಗಿ ಚಿಕಿತ್ಸೆ ನೀಡಲಾಗಿದೆ, ಯಾವುದೇ ತೊಂದರೆ ಇರುವುದಿಲ್ಲ ಪೋಷಕರು ಮತ್ತು ಸಾರ್ವಜನಿಕರಲ್ಲಿ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.