ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಜರ್ಮನಿಯ ಮಾಜಿ ಚಾನ್ಸೆಲರ್ ಎಂಜೆಲಾ ಮಾರ್ಕೆಲ್ ಅವರಲ್ಲಿ ಕ್ಷಮೆಯಾಚಿಸಿದ್ದಾರೆ.
ಅದಕ್ಕೆ ಕಾರಣ 2007ರಲ್ಲಿ ನಡೆದ ಆ ಒಂದು ಘಟನೆ. ಹೌದು, ಅಂದು ನಡೆದ ಘಟನೆಗೆ ಇಂದು ರಷ್ಯಾ ಅಧ್ಯಕ್ಷ ವ್ಲಾಡಮೀರ್ ಪುಟಿನ್ ಕ್ಷಮಾಪಣೆಯನ್ನು ಕೇಳುತ್ತಿದ್ದಾರೆ. ಅಸಲಿಗೆ ಆಗಿದ್ದೇನು ಎಂಬುದನ್ನು ನೋಡಿದರೆ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಪುಟಿನ್ ಅವರ ನೆಚ್ಚಿನ ಶ್ವಾನ.
2007ರಲ್ಲಿ ಜರ್ಮನ್ನ ಅಂದಿನ ಚಾನ್ಸಲರ್ ಎಂಜೆಲಾ ಮಾರ್ಕೆಲ್ ರಷ್ಯಾಗೆ ಭೇಟಿ ನೀಡಿದ್ದರು. ಅವರ ಭೇಟಿಯ ಸಮಯದಲ್ಲಿ ವ್ಲಾಡಮಿರ್ ಪುಟಿನ್ ಅವರ ಶ್ವಾನ ಎಂಜೆಲಾ ಮಾರ್ಕೆಲ್ ಅವರ ಬಳಿ ಕುಳಿತುಕೊಂಡಿತ್ತು. ಮೊದಲೇ ಪ್ರಾಣಿಗಳೆಂದರೆ ಬೆಚ್ಚಿ ಬೀಳುವ ಎಂಜೆಲಾ ಮಾರ್ಕೆಲ್ ವ್ಲಾಡಮಿರ್ ಪುಟಿನ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ವ್ಲಾಡಮಿರ್ ಪುಟಿನ್ ಅಂದು ತಮ್ಮ ಅಧಿಕಾರದ ಪ್ರದರ್ಶನ ಮಾಡಿದ್ದರು ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದರು.
ಈ ಬಗ್ಗೆ ಮಾತನಾಡಿರುವ ರಷ್ಯಾದ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಈ ಮಾಧ್ಯಮಗಳ ಮೂಲಕ ನಾನು ಎಂಜೆಲಾ ಮಾರ್ಕೆಲಗೆ ಕ್ಷಮೆಯನ್ನು ಯಾಚಿಸುತ್ತೇನೆ. ನನಗೆ ನಿಜಕ್ಕೂ ಗೊತ್ತಿರಲಿಲ್ಲ ಅವರು ಪ್ರಾಣಿಗಳಿಗೆ ಹೆದರುತ್ತಾರೆ ಎಂದು. ನಾನು ಆ ಸಮಯದಲ್ಲಿ ಒಂದು ಒಳ್ಳೆಯ ವಾತಾವರಣ ನಿರ್ಮಾಣವಾಗಲಿ ಎಂದು ಶ್ವಾನವನ್ನು ಬರಲು ಅನುಮತಿ ನೀಡಿದ್ದೆ ಹೊರತು ಬೇರಾವ ದುರುದ್ದೇಶದಿಂದಲೂ ಅಲ್ಲ ಎಂದು ಹೇಳಿದ್ದಾರೆ.
ನೀವು ಮತ್ತೊಮ್ಮೆ ರಷ್ಯಾಗೆ ದಯವಿಟ್ಟು ಭೇಟಿ ನೀಡಿ ಇಂತಹ ಸನ್ನಿವೇಶಗಳು ಮತ್ತೆ ಸೃಷ್ಟಿಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸದ್ಯ ಈ ಒಂದು ಕ್ಷಮಾಪಣೆ ಈಗ ಸೋಷಿಯಲ್ ಮೀಡಿಯಾದಲ್ಲಿ 2007ರಂದು ನಡೆದ ಆ ಘಟನೆಯ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿದೆ.