July 16, 2026
Thursday, July 16, 2026
spot_img

ಹೊರಟ್ಟಿಯಲ್ಲಿ ಏಕಾಏಕಿ 40 ವಿದ್ಯಾರ್ಥಿಗಳಿಗೆ ಜ್ವರ, ಆಸ್ಪತ್ರೆಗೆ ದಾಖಲು

ಹೊಸದಿಗಂತ ವರದಿ ಯಾದಗಿರಿ:

ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ 40 ಮಕ್ಕಳಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಘಟನೆ ಶನಿವಾರ ನಡೆದಿದೆ.

ಗ್ರಾಮದ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನವೇ ಕೆಲ ವಿದ್ಯಾರ್ಥಿಗಳಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದು, ಪರಿಸ್ಥಿತಿಯನ್ನು ಗಮನಿಸಿದ ಮುಖ್ಯಗುರು ಮಲ್ಲಿಕಾರ್ಜುನ ಅವರು ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದರು. ಬಳಿಕ ಶನಿವಾರ ಹಲವಾರು ಮಕ್ಕಳಲ್ಲಿ ಜ್ವರ ತೀವ್ರಗೊಂಡ ಹಿನ್ನೆಲೆಯಲ್ಲಿ ಅವರನ್ನು ಕೊಡೇಕಲ್ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಲಾಗಿದೆ.

20 ಮಕ್ಕಳಿಗೆ ಹೊರರೋಗಿ ವಿಭಾಗದಲ್ಲಿ (ಒಪಿಡಿ) ಚಿಕಿತ್ಸೆ ನೀಡಲಾಗುತ್ತಿದ್ದು, ನಾಲ್ವರು ಮಕ್ಕಳನ್ನು ಆಸ್ಪತ್ರೆಯ ಹಾಸಿಗೆಗಳಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಉಳಿದ ಮಕ್ಕಳ ಮನೆಗೆ ಕಳುಹಿಸಿದ್ದು, ಆರೋಗ್ಯ ಸ್ಥಿತಿಯ ಮೇಲೂ ವೈದ್ಯರು ನಿಗಾ ವಹಿಸಿದ್ದಾರೆ. ಸುರಪುರ ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಪ್ಪನಾಯಕ ಭೇಟಿ ನೀಡಿ, ಜ್ವರ ಕಾಣಿಸಿಕೊಂಡ 18 ಮಕ್ಕಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಜ್ವರದ ನಿಖರ ಕಾರಣ ತಿಳಿಯಲಿದೆ.

ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದು ಕ್ಷೇತ್ರ ಶಿಕ್ಷಣಾಧಿಕಾರಿ ಲಿಂಗರಾಜ ಮೂಲಿಮನಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಅವರು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಕ್ಕಳ ಚಿಕಿತ್ಸೆಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ಅಗತ್ಯ ಔಷಧಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜ್ವರದ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮಕ್ಕೆ ಭೇಟಿ ನೀಡಿ ಸ್ವಚ್ಛತೆ, ಕುಡಿಯುವ ನೀರಿನ ಗುಣಮಟ್ಟ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಪರಿಶೀಲನೆ ನಡೆಸಲು ತಿಳಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !