ತಿರುಪತಿಯಲ್ಲಿ 48 ಗಂಟೆ ಕಳೆದರೂ ಸಿಗದ ದರುಶನ: ತಿಮ್ಮಪ್ಪನ ವೀಕ್ಷಣೆ ಮುಂದೂಡಿ ಎಂದ ಟಿಟಿಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಿರುಪತಿಯ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದ್ದು, ದೇವರ ದರ್ಶನಕ್ಕೆ ಬರೊಬ್ಬರಿ 48 ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆ ಭಕ್ತರು ತಮ್ಮ ಯಾತ್ರೆಯನ್ನು ಮುಂದೂಡುವಂತೆ ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಭಕ್ತರಿಗೆ ಮನವಿ ಮಾಡಿದೆ.
ಟಿಟಿಡಿ ಮೂಲಗಳ ಪ್ರಕಾರ, ಶನಿವಾರ 89,318 ಭಕ್ತರಿಗಷ್ಟೇ ದರ್ಶನ ಭಾಗ್ಯ ದೊರೆತಿದ್ದು, ಬೆಟ್ಟದಲ್ಲಿ 30 ಸಾವಿರಕ್ಕೂ ಹೆಚ್ಚು ಭಕ್ತರು ತಮ್ಮ ಸರದಿಗೆ ಕಾಯುತ್ತಿದ್ದರು. ಈ ಕಾರಣದಿಂದ ಭಕ್ತರು ದೇಗುಲಕ್ಕೆ ಭೇಟಿ ನೀಡುವ ದಿನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ದೇವಸ್ಥಾನದ ಅಧಿಕಾರಿಗಳು ಕೋರಿದ್ದಾರೆ.
ಭಕ್ತರ ಅನಿರೀಕ್ಷಿತ ದಟ್ಟಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಬುಧವಾರದವರೆಗೆ ವಿಐಪಿ ಬ್ರೇಕ್‌’ ದರ್ಶನ ಸೌಲಭ್ಯವನ್ನೂ ರದ್ದುಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ದೇವಾಲಯದ ಒಳಾವರಣ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದಾರೆ.
ಗಂಟೆಗೆ 4,500 ಭಕ್ತರಿಗಷ್ಟೇ ಅವಕಾಶ ಕಲ್ಪಿಸಲು ಸಾಧ್ಯವಿದೆ. ಆದರೆ, ಪ್ರತಿ ಗಂಟೆಗೆ ಸರದಿಗೆ ಸುಮಾರು 8,000 ಭಕ್ತರು ಸೇರ್ಪಡೆ ಆಗುತ್ತಿದ್ದಾರೆ. ಇನ್ನೂ ಕೆಲವು ದಿನ ಹೀಗೇ ಭಕ್ತರದಟ್ಟಣೆ ಇರುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದರ್ಶನಕ್ಕಾಗಿ ಇರುವ ಎಲ್ಲ ಸರದಿ ಸಾಲುಗಳು ಭರ್ತಿಯಾಗಿದ್ದು, ಕಾಯ್ದು ನಿಲ್ಲುವ 30 ವಿಭಾಗಗಳು ಭರ್ತಿಯಾಗಿವೆ. ಇವುಗಳ ಹೊರತು 2 ಕಿ.ಮೀನಷ್ಟು ಭಕ್ತರ ಸಾಲು ಇದೆ. ಬೆಟ್ಟದ ಪ್ರವೇಶ ಮಾರ್ಗ ಅಲಿಪಿರಿ ಟೋಲ್‌ಗೇಟ್ ಬಳಿಯೂ ವಾಹನಗಳ ಉದ್ದನೆಯ ಸಾಲಿದೆ. ಭಕ್ತರ ದಟ್ಟಣೆಯ ಹಿನ್ನೆಲೆಯಲ್ಲಿ ಕುಡಿಯುವ ನೀರು, ಹಾಲು, ಅನ್ನಪ್ರಸಾದಕ್ಕೆ ಸೌಲಭ್ಯ ಕಲ್ಪಿಸಲು ಹೆಚ್ಚಿನ ಸಿದ್ಧತೆ ಆಗಿದೆ.
ಕೋವಿಡ್‌ ಸಾಂಕ್ರಾಮಿಕದ ಕಾರಣ ಎರಡು ವರ್ಷ ದೇಗುಲಕ್ಕೆ ಭೇಟಿ ನೀಡುವುದಕ್ಕೆ ನಿರ್ಬಂಧವಿತ್ತು. ಪರಿಣಾಮ, ಈಗ ನಿರ್ಬಂಧ ಸಡಿಲಿಕೆಯ ಹಂತದ ನಂತರ ಈಗ ಬೇಸಿಗೆ ರಜೆ ಅವಧಿ ಹಾಗೂ ವಾರಾಂತ್ಯದಲ್ಲಿ ದೇಗುಲಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!