November 13, 2026
Friday, November 13, 2026
spot_img

ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯ: ಟೀಂ ಇಂಡಿಯಾದಲ್ಲಿ ಮೂರು ದೊಡ್ಡ ಬದಲಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ರೋಚಕ ಏಕದಿನ ಸರಣಿಯ ನಾಲ್ಕನೇ ಪಂದ್ಯವು ಬೇ ಓವಲ್ ಮೈದಾನದಲ್ಲಿ ಭರ್ಜರಿಯಾಗಿ ಆರಂಭಗೊಂಡಿದೆ. ಇದುವರೆಗೆ ನಡೆದ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದಿರುವ ಭಾರತ ತಂಡವು 2-0 ಮುನ್ನಡೆ ಸಾಧಿಸಿ ಬೀಗುತ್ತಿದ್ದರೆ, ಮೂರನೇ ಪಂದ್ಯ ಮಳೆಯ ಕಾರಣದಿಂದ ರದ್ದಾಗಿತ್ತು. ಸದ್ಯ ತವರಿನಲ್ಲೇ ಸರಣಿ ಕಳೆದುಕೊಳ್ಳುವ ಭೀತಿಯಲ್ಲಿರುವ ನ್ಯೂಜಿಲೆಂಡ್ ತಂಡಕ್ಕೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಕಠಿಣ ಒತ್ತಡ ಎದುರಾಗಿದೆ.

ಈ ನಿರ್ಣಾಯಕ ಕದನದಲ್ಲಿ ಅದೃಷ್ಟ ಭಾರತದ ಕಡೆ ಒಲಿದಿದ್ದು, ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಪಿಚ್ ಪರಿಸ್ಥಿತಿಯ ಲಾಭ ಪಡೆದು ಆರಂಭದಲ್ಲೇ ಕಿವೀಸ್ ಬ್ಯಾಟಿಂಗ್ ಲೈನ್ ಅಪ್ ಅನ್ನು ಕಟ್ಟಿಹಾಕುವ ಯೋಜನೆಯಲ್ಲಿ ಭಾರತೀಯ ಬೌಲರ್‌ಗಳು ಕಣಕ್ಕಿಳಿದಿದ್ದಾರೆ.

ಮುಂದಿನ ಟೆಸ್ಟ್ ಸರಣಿಗೆ ಸಿದ್ಧತೆಗಳನ್ನು ಆರಂಭಿಸುವ ಉದ್ದೇಶದಿಂದ ಎರಡೂ ತಂಡಗಳ ಕೆಲವು ಪ್ರಮುಖ ಆಟಗಾರರು ಏಕದಿನ ಶಿಬಿರದಿಂದ ಹೊರಬಂದು ಟೆಸ್ಟ್ ತಂಡವನ್ನು ಸೇರಿಕೊಂಡಿದ್ದಾರೆ. ಇದರ ಪರಿಣಾಮವಾಗಿ, ಈ ನಾಲ್ಕನೇ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ತಮ್ಮ ಪ್ಲೇಯಿಂಗ್ ಇಲೆವೆನ್‌ನಲ್ಲಿ ಬರೋಬ್ಬರಿ 9 ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿವೆ.

ಭಾರತೀಯ ತಂಡದ ಆಡಳಿತ ಮಂಡಳಿಯು ಪ್ಲೇಯಿಂಗ್ ಇಲೆವೆನ್‌ನಲ್ಲಿ ಮೂರು ಪ್ರಮುಖ ತಪಾಸಣೆಗಳನ್ನು ಮಾಡಿದೆ. ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಬದಲಿಗೆ ರುತುರಾಜ್ ಗಾಯಕ್ವಾಡ್ ಈ ಸರಣಿಯಲ್ಲಿ ಮೊದಲ ಬಾರಿಗೆ ಅವಕಾಶ ಪಡೆದಿದ್ದಾರೆ. ಹಾಗೆಯೇ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಸ್ಥಾನದಲ್ಲಿ ಯುವ ಆಟಗಾರ ಇಶಾನ್ ಕಿಶನ್ ಕಣಕ್ಕಿಳಿದಿದ್ದಾರೆ. ಇದರೊಂದಿಗೆ ವೇಗಿ ಅನ್ಶುಲ್ ಕಾಂಬೋಜ್ ಬದಲು ಸ್ಪಿನ್ನರ್ ಕುಲ್ದೀಪ್ ಯಾದವ್ ತಂಡಕ್ಕೆ ಮರಳಿ ಬಲ ತುಂಬಿದ್ದಾರೆ.

ಮತ್ತೊಂದೆಡೆ, ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ಕಿವೀಸ್ ಪಡೆ ತನ್ನ ತಂಡದಲ್ಲಿ ಬರೋಬ್ಬರಿ ಆರು ಬದಲಾವಣೆಗಳನ್ನು ಮಾಡಿಕೊಂಡಿದೆ. ಬ್ಯಾಟಿಂಗ್‌ನಲ್ಲಿ ನಿಕ್ ಕೆಲ್ಲಿ (3ನೇ ಕ್ರಮಾಂಕ) ಹಾಗೂ ಡೀನ್ ಫಾಕ್ಸ್‌ಕ್ರಾಫ್ಟ್ (4ನೇ ಕ್ರಮಾಂಕ) ಜವಾಬ್ದಾರಿ ಹೊತ್ತಿದ್ದಾರೆ. ಇವರೊಂದಿಗೆ ಸ್ಪೋಟಕ ಬ್ಯಾಟರ್ ಫಿನ್ ಅಲೆನ್, ಅನುಭವಿ ವೇಗಿ ಮ್ಯಾಟ್ ಹೆನ್ರಿ, ಮೈಕಲ್ ಬ್ರೇಸ್‌ವೆಲ್ ಮತ್ತು ಕ್ರಿಸ್ಟಿಯನ್ ಕ್ಲಾರ್ಕ್ ಆಡುವ ಹನ್ನೊಂದರ ಬಳಗಕ್ಕೆ ಲಗ್ಗೆ ಇಟ್ಟಿದ್ದಾರೆ. ಸರಣಿಯನ್ನು ಕೈವಶ ಮಾಡಿಕೊಳ್ಳಲು ಭಾರತದ ಯುವ ಪಡೆ ಯಾವ ರೀತಿ ಹೋರಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Must Read