5 ರೂ. ಚಿಲ್ಲರೆ ಕೊಡದೆ ಪ್ರಯಾಣಿಕನ ಮೇಲೆ ಹಲ್ಲೆ: ಬಿಎಂಟಿಸಿ ಬಸ್‌ ಕಂಡಕ್ಟರ್‌ ಸಸ್ಪೆಂಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರಿಗೆ 5 ರೂ. ಚಿಲ್ಲರೆ ಕೊಡದೆ, ಅವರ ಮೇಲೆಯೇ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಬಸ್‌ ಕಂಡಕ್ಟರ್‌ನನ್ನು ಅಮಾನತುಗೊಳಿಸಿದೆ. ಈ ಕುರಿತು ಬಿಎಂಟಿಸಿ ಆದೇಶ ಹೊರಡಿಸಿ ಪ್ರಕಟಣೆ ತಿಳಿಸಿದೆ.

ಆಗಸ್ಟ್‌ 6ರಂದು ಘಟನೆ ನಡೆದಿದ್ದು, ಕ್ಷಿಪ್ರವಾಗಿ ಬಸ್‌ ಕಂಡಕ್ಟರ್‌ ವಿರುದ್ಧ ಬಿಎಂಟಿಸಿ ಕ್ರಮ ತೆಗೆದುಕೊಂಡಿದೆ. ಬಿಎಂಟಿಸಿ ಬಸ್‌ನಲ್ಲಿ ಅಭಿನವ್‌ ರಾಜ್‌ ಎಂಬ ಯುವಕ ಪ್ರಯಾಣಿಸುತ್ತಿದ್ದರು. ಅವರು 15 ರೂ. ಟಿಕೆಟ್‌ಗೆ 20 ರೂ. ನೀಡಿದ್ದರು. 5 ರೂ. ಚಿಲ್ಲರೆ ವಾಪಸ್‌ ಕೇಳಿದಾಗ ಪ್ರಯಾಣಿಕನ ಮೇಲೆ ಕಂಡಕ್ಟರ್‌ ರೇಗಾಡಿದ್ದಾರೆ. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದೇ ಕೋಪದಲ್ಲಿ ಕಂಡಕ್ಟರ್‌ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೊ ಮಾಡಿಕೊಂಡಿದ್ದ ಅಭಿನವ್‌ ರಾಜ್‌, ಬಿಎಂಟಿಸಿಗೆ ದೂರು ನೀಡಿದ್ದರು. ಅದರಂತೆ, ಅಮಾನತು ಮಾಡಲಾಗಿದೆ.

‘ಬೆಂಗಳೂರು ಮಹಾನಗರ ಸಾರಿಗೆ ಘಟಕ-32ರ ಬಸ್‌ನ ನಿರ್ವಾಹಕರು ಆಗಸ್ಟ್‌ 6ರಂದು ರಾತ್ರಿ ಸುಮಾರು 9..40 ಸುಮಾರಿಗೆ ಕರ್ತವ್ಯ ನಿರ್ವಹಿಸುವಾಗ ಅಭಿನವ್‌ ರಾಜ್‌ ಎಂಬ ಪ್ರಯಾಣಿಕರು 5 ರೂ. ಚಿಲ್ಲರೆ ವಾಪಸ್‌ ಕೊಡಿ ಎಂಬುದಾಗಿ ಕೇಳಿದ್ದಾರೆ. ಇದಕ್ಕೆ ನಿರ್ವಾಹಕರು ಪ್ರಯಾಣಿಕರ ಎದುರು ಅನುಚಿತವಾಗಿ ವರ್ತನೆ ತೋರಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ’ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದಲ್ಲದೆ, ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸುವುದು ಸುರಕ್ಷಿತ ಎನ್ನುವ ಭಾವನೆ ಉಂಟಾಗಲು ಅಗತ್ಯವಿರುವ ಕ್ರಮಗಳನ್ನು ಸಹ ಕೈಗೊಳ್ಳಲಾಗಿರುತ್ತದೆ. ಪ್ರಯಾಣಿಕರ ಮೇಲೆ ಯಾವುದೇ ತರಹದ ದೌರ್ಜನ್ಯ ಅಸಭ್ಯ ವರ್ತನೆ ಮತ್ತು ಅಹಿತಕರ ಘಟನೆಗಳು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುತ್ತದೆ’ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!