October 18, 2026
Sunday, October 18, 2026
spot_img

ಟ್ರಾಫಿಕ್ ಫೈನ್ 50% ಡಿಸ್ಕೌಂಟ್‌: ಕೇವಲ 14 ದಿನದಲ್ಲಿ ಹರಿದುಬಂತು ಕೋಟಿ ಕೋಟಿ ಹಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಸಂಚಾರ ಪೊಲೀಸ್ ಇಲಾಖೆ ನೀಡಿರುವ ಶೇ. 50 ರಿಯಾಯಿತಿ ಆಫರ್ ಇಟ್ಟುಕೊಂಡು ಸವಾರರು ಬಾಕಿ ದಂಡವನ್ನು ಮುಗಿಸುತ್ತಿದ್ದಾರೆ. ಜೂನ್ 21 ರಿಂದ ಆರಂಭವಾದ ಈ ವಿಶೇಷ ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕಳೆದ ಜೂನ್ 21 ರಿಂದ ಜುಲೈ 4 ರವರೆಗಿನ ಕೇವಲ 14 ದಿನಗಳ ಅವಧಿಯಲ್ಲಿ ಬರೋಬ್ಬರಿ 6,06,032 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಇತ್ಯರ್ಥಗೊಂಡಿವೆ. ಇದರ ಪರಿಣಾಮವಾಗಿ ಸರ್ಕಾರಕ್ಕೆ ಬರೋಬ್ಬರಿ 18 ಕೋಟಿಗೂ ಅಧಿಕ ರೂಪಾಯಿ ಆದಾಯ ಹರಿದುಬಂದಿದೆ.

ಜುಲೈ 10 ಕೊನೆಯ ದಿನಾಂಕ

ವಾಹನ ಸವಾರರು ತಮ್ಮ ಹಳೆಯ ದಂಡವನ್ನು ಅರ್ಧ ಬೆಲೆಯಲ್ಲಿ ಪಾವತಿಸಲು ಇಲಾಖೆಯು ಜುಲೈ 10 ರವರೆಗೆ ಅಂತಿಮ ಗಡುವು ನೀಡಿದೆ. ಡಿಜಿಟಲ್ ಪಾವತಿ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ದಂಡ ಕಟ್ಟಲು ಸವಾರರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ರಸ್ತೆಗಿಳಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ

ದಂಡ ಸಂಗ್ರಹ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ನಗರದ ಪ್ರಮುಖ ರಸ್ತೆ ಹಾಗೂ ಜಂಕ್ಷನ್‌ಗಳಲ್ಲಿ ಪಿಎಸ್‌ಐ ಸೇರಿದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈ ಸಿಬ್ಬಂದಿಗಳು ವಾಹನ ಸವಾರರಿಗೆ ಆನ್‌ಲೈನ್ ಮೂಲಕ ದಂಡ ಕಟ್ಟಲು ನೆರವಾಗುತ್ತಿದ್ದಾರೆ. ಇದರೊಂದಿಗೆ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸುವ ಮಹತ್ವದ ಕಾರ್ಯಾಚರಣೆಯನ್ನೂ ಪೊಲೀಸರು ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಬಾಕಿ ದಂಡ ತೀರಿಸಲು ಸವಾರರಿಗೆ ಇದೊಂದು ಕೊನೆಯ ಚಾನ್ಸ್ ಆಗಿದೆ.

Must Read