50 ವರ್ಷಗಳ ಬಳಿಕ ಕೂಲ್ ಕೂಲ್ ಆದ ಸಿಲಿಕಾನ್ ಸಿಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
 
ಬೆಂಗಳೂರಿನಲ್ಲಿ ತಾಪಮಾನ ಭಾರೀ ಕುಸಿತವಾಗಿದ್ದು, ಇಲ್ಲಿನ ವಾತಾವರಣ ಶಿಮ್ಲಾವನ್ನೂ ಮೀರಿಸುವಂತಿದೆ.
ಎರಡು ದಿನಗಳಿಂದ ಬೆಂಗಳೂರಿನಲ್ಲಿ 23 ಡಿಗ್ರಿ ಸೆಲ್ಸಿಯಸ್​ಗಿಂತಲೂ ತಾಪಮಾನ ಕುಸಿತವಾಗಿದ್ದು, ಬೆಳಗ್ಗೆಯಿಂದ ರಾತ್ರಿವರೆಗೂ ಮೋಡ ಮುಸುಕಿದ ವಾತಾವರಣವಿದ್ದು, ಚುಮುಗುಡುವ ಚಳಿಗೆ ಬೆಂಗಳೂರಿಗರು ಗಡಗಡ ನಡುಗುತ್ತಿದ್ದಾರೆ.
ಗುರುವಾರ ತಾಪಮಾನವು 11 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದಿದ್ದರಿಂದ ಕಳೆದ 50 ವರ್ಷಗಳಲ್ಲಿ ಮೇ ತಿಂಗಳಲ್ಲಿ ಬೆಂಗಳೂರು ಎರಡನೇ ಅತಿ ಚಳಿಯ ದಿನವನ್ನು ದಾಖಲಿಸಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್‌ನಿಂದ 23 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. 1972ರ ಮೇ 14ರಂದು ಬೆಂಗಳೂರಿನಲ್ಲಿ ಕೊನೆಯ ಬಾರಿಗೆ ತಂಪಾದ ದಿನವನ್ನು ದಾಖಲಿಸಿತ್ತು. ಇಲ್ಲಿನ ತಾಪಮಾನವು 22.2 ಡಿಗ್ರಿ ಸೆಲ್ಸಿಯಸ್ ಇತ್ತು.
ಈಶಾನ್ಯ ಮತ್ತು ದಕ್ಷಿಣ ಕರ್ನಾಟಕದಲ್ಲಿ ಕಳೆದ 10 ದಿನಗಳಿಂದ ಭಾರೀ ಮಳೆಯಾಗುತ್ತಿತ್ತು. ಆದರೆ, ಇದೀಗ ಮಳೆ ಕಡಿಮೆಯಾಗಿದ್ದರೂ ಚಳಿಯ ವಾತಾವರಣ ಹೆಚ್ಚಾಗಿದೆ. ಈ ತಂಪಾದ ವಾತಾವರಣಕ್ಕೆ ಅಸಾನಿ ಚಂಡಮಾರುತ ಕಾರಣ ಎನ್ನಲಾಗಿದ್ದು,ಇದರಿಂದ ಬೆಂಗಳೂರು ಕಳೆದ 50 ವರ್ಷಗಳಲ್ಲಿ 2ನೇ ಅತಿ ಕಡಿಮೆ ವಾತಾವರಣ ದಾಖಲಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಗುರುವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24.3 ಡಿಗ್ರಿ ಸೆಲ್ಸಿಯಸ್ ಮತ್ತು ಶುಕ್ರವಾರ ಬೆಳಿಗ್ಗೆ 23 ಡಿಗ್ರಿ ಸೆಲ್ಸಿಯಸ್​​ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ ಇನ್ನೆರಡು ದಿನ ಇದೇ ರೀತಿ ಮೋಡ ಕವಿದ ವಾತಾವರಣ ಇರಲಿದೆ ಎಂದು IMD ಮುನ್ಸೂಚನೆ ನೀಡಿರುವುದರಿಂದ ಚಳಿಯ ವಾತಾವರಣವು ಮುಂದುವರಿಯುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!