ಭಕ್ತರ ದೇಣಿಗೆಯಿಂದ ನಿರ್ಮಾಣವಾದ 52 ಕೆ.ಜಿ. ಬೆಳ್ಳಿ ರಥ ಲೋಕಾರ್ಪಣೆ

ಹೊಸದಿಗಂತ ವರದಿ ಬಾಗಲಕೋಟೆ:

ಭಕ್ತರ ದೇಣಿಗೆಯಿಂದ ನಿರ್ಮಾಣವಾಗಿರುವ ತಾಲ್ಲೂಕಿನ ಸುಕ್ಷೇತ್ರ ಮುಚಖಂಡಿ ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರ ದೇವಸ್ಥಾನದ ನೂತನ ಬೆಳ್ಳಿ ರಥವನ್ನು ಶಾಸಕ ವೀರಣ್ಣ ಚರಂತಿಮಠ ಲೋಕಾರ್ಪಣೆ ಮಾಡಿದರು. ನಂತರ ಬೆಳ್ಳಿ ರಥದ ಭವ್ಯ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ವಿದ್ಯಾಗಿರಿಯ 21ನೇ ಕ್ರಾಸ್‌ ನಲ್ಲಿರುವ ಗಂಗೂರವರ ನಿವಾಸದ ಮುಂದೆ ಮಂಗಳವಾರ ಬೆಳ್ಳಿ ರಥ ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಶಾಸಕರು, ಮುಚಖಂಡಿ ಗ್ರಾಮದ ವೀರಭದ್ರೇಶ್ವರ ಈ ಭಾಗದ ಆರಾಧ್ಯ ದೈವನಾಗಿದ್ದು, ಈ ದೇವಸ್ಥಾನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದುಕೊಂಡು ಹೋಗುತ್ತಾರೆ. ಭಕ್ತರು ನೀಡಿದ ದೇಣಿಗೆಯಿಂದ ಬೆಳ್ಳಿ ರಥ ನಿರ್ಮಾಣವಾಗಿದ್ದು ಇಂದು ಲೋಕಾರ್ಪಣೆ ಮಾಡಲಾಯಿತು ಎಂದರು.

ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ದ್ಧಾರ ಕಮೀಟಿಯ ಅಧ್ಯಕ್ಷ ಗುರುಬಸವ ಸೂಳಿಭಾವಿ ಮಾತನಾಡಿ, 52 ಕೆ.ಜಿ.ಯಲ್ಲಿ ವೀರಭದ್ರೇಶ್ವರ ಬೆಳ್ಳಿ ರಥ ನಿರ್ಮಾ ಣವಾಗಿದೆ. ಬಾಗಲಕೋಟೆ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದಲ್ಲದೇ ಹೊರದೇಶದಲ್ಲಿರುವ ವೀರಭದ್ರೇಶ್ವರ ದೇವರ ಭಕ್ತರು ಬೆಳ್ಳಿ ರಥ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಅರ್ಧ ಕೆ.ಜಿ., 1 ಕೆ.ಜಿ,  5 ಕೆ.ಜಿ. 10 ಕೆ.ಜಿ ಹೀಗೆ ಸಾಕಷ್ಟು ಭಕ್ತರು ತಮ್ಮ ಕೈಲಾದಷ್ಟು ಸ್ವಯಂ ಪ್ರೇರಣೆಯಿಂದ ಬೆಳ್ಳಿ ರಥ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿದ್ದಾರೆಂದಿದ್ದಾರೆ.

ಮುಚಖಂಡಿ ಗ್ರಾಮದ ಸಕಲ ದೈವ ಮಂಡಳಿಯವರ ಹಾಗೂ ಕಮಿಟಿಯವರ ಸಹಕಾರದಿಂದ ಮುಚಖಂಡಿ ಗ್ರಾಮದ ಧಾರ್ಮಿಕ ಕ್ಷೇತ್ರವಾಗಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಕ್ಷೇತ್ರದ ಶಾಸಕರಾಗಿರುವ ವೀರಣ್ಣ ಚರಂತಿಮಠವರು ಕೂಡ ದೇವಸ್ಥಾನದ ಜೀಣೋದ್ಧಾರಕ್ಕೆ ಸದಾ ಸಹಕಾರ ನೀಡುತ್ತಿದ್ದಾರೆ ಎಂದರು.

ಮುಚಖಂಡಿ ಗ್ರಾಮದ ಮಹಿಳೆಯರ ಆರುತಿ, ಭಜನಾ ಮಂಡಳಿ, ಸಕಲ ವಾಧ್ಯ ವೈಭವದೊಂದಿಗೆ ಆರಂಭಗೊಂಡ ಬೆಳ್ಳಿ ರಥದ ಭವ್ಯ ಮೆರವಣಿಗೆ ವಿದ್ಯಾಗಿರಿಯ 21ನೇ ಕ್ರಾಸ್ದಿಂದ ಆರಂಭಗೊಂಡು ಬಸವೇಶ್ವರ ಎಂಜನೀಯರಿಂಗ್ ಕ್ರಾಸ್, ಕಾಳಿದಾಸ್ ವೃತ್ತ, ಬಸವೇಶ್ವರ ಬ್ಯಾಂಕ್ ರಸ್ತೆ ಮೂಲಕ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ತಲುಪಿತು.

ಗಂಗೂರವರು ನಿರ್ಮಿಸಿದ ಬೆಳ್ಳಿ ರಥಕ್ಕೆ ಬೆಳಿಗ್ಗೆ ಬಿಲ್ ಕೆರೂರ ಬಿಲ್ವಾಶ್ರಮ ಸಿದ್ಧಲಿಂಗ ಶಿವಾಚಾರ್ಯರು, ಮುತ್ತತ್ತಿ ಹಿರೇಮಠದ ಗುರುಲಿಂಗ ಶಿವಯೋಗ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿದ್ಯದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಬೆಳ್ಳಿ ರಥ ಹೋಗುವ ಮಾರ್ಗದಲ್ಲಿ ಭಕ್ತರು ರಸ್ತೆಯ ಅಕ್ಕಪಕ್ಕ ನಿಂತು ರಥಕ್ಕೆ ಕೈ ಮುಗಿದು ನಮಿಸುತ್ತಿದ್ದರು, ಇದಲ್ಲದೇ ಭಕ್ತರು ಪೂಜೆಯನ್ನು ಸಹ ಸಲ್ಲಿಸಿದರು.

ವೀರಭದ್ರೇಶ್ವರ ದೇವಸ್ಥಾನದ ಬೆಳ್ಳಿ ರಥ ಮುಚಖಂಡಿ ಗ್ರಾಮವನ್ನು ಪ್ರವೇಶ ಮಾಡುತ್ತಿದ್ದಂತೆ ಗ್ರಾಮದ ರಸ್ತೆಗಳಲ್ಲಿ ಭಕ್ತಾದಿಗಳು ಬೆಳ್ಳಿ ರಥಕ್ಕೆ ಚುರುಮುರಿ ಮತ್ತು ಹೂವುಗಳನ್ನು ಅರ್ಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!