ಹೊಸದಿಗಂತ, ಬೀದರ್:
ಜಿಲ್ಲೆಯ ಭಾಲ್ಕಿ ತಾಲೂಕಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಅಡುಗೆ ಅನಿಲ ಸಿಲಿಂಡರ್ ಕಳವು ಪ್ರಕರಣಗಳನ್ನು ಭೇದಿಸಿರುವ ಜಿಲ್ಲಾ ಪೊಲೀಸರು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿ, 9.75 ಲಕ್ಷ ರೂ. ಮೌಲ್ಯದ 55 ಅನಿಲ ಸಿಲಿಂಡರ್, ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 4, ಮೇಹಕರ್ ಪೊಲೀಸ್ ಠಾಣೆಯಲ್ಲಿ 3 ಹಾಗೂ ಖಟಕ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ 2 ಸೇರಿ ಒಟ್ಟು 9 ಸಿಲಿಂಡರ್ ಕಳವು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಪ್ತಿ ಮಾಡಲಾದ 55 ಸಿಲಿಂಡರ್‌ಗಳ ಮೌಲ್ಯ 2.75 ಲಕ್ಷ ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರಿನ ಮೌಲ್ಯ 7 ಲಕ್ಷ ರೂ.ವಾಗಿದ್ದು, ಒಟ್ಟು 9.75 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆ. 2 ರಂದು ಕಳವು ಮಾಡಿದ ಸಿಲಿಂಡರ್‌ಗಳನ್ನು ಮಹಾರಾಷ್ಟ್ರದ ಉದಗೀರ ಕಡೆಗೆ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಭಾಲ್ಕಿ ಡಿವೈಎಸ್‌ಪಿ ಬಲಪ್ಪ ನಂದಗಾವೆ ಅವರ ಮಾರ್ಗದರ್ಶನದಲ್ಲಿ ಸಿಪಿಐ ಹಣಮರೆಡ್ಡಪ್ಪ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಅಶೋಕ್ ಪಾಟೀಲ್ ಅವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಭಾಲ್ಕಿ ತಾಲೂಕಿನ 27 ಗ್ರಾಮ, ಹುಮನಾಬಾದ್ ತಾಲೂಕಿನ 8 ಗ್ರಾಮ ಹಾಗೂ ಬಸವಕಲ್ಯಾಣ ತಾಲೂಕಿನ 1 ಗ್ರಾಮದಲ್ಲಿರುವ ವಿವಿಧ ಶಾಲೆಗಳ ಅಡುಗೆ ಕೊಠಡಿಗಳ ಬೀಗ ಮುರಿದು ಸಿಲಿಂಡರ್‌ಗಳನ್ನು ಕಳವು ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಕಳವು ಮಾಡಿದ ಸಿಲಿಂಡರ್‌ಗಳನ್ನು ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಸಮೀಪದ ಚಹಾ ಹೋಟೆಲ್‌ನಲ್ಲಿ ಅಡಗಿಸಿಟ್ಟಿರುವ ಮಾಹಿತಿ ನೀಡಿದ್ದು, ಅಲ್ಲಿಂದ ಪೊಲೀಸರು 55 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಲ್ಕಿ ಗ್ರಾಮೀಣ ಠಾಣೆಯ ಸಿಬ್ಬಂದಿಗಳಾದ ಭಗವಾನ, ಗುರುನಾಥ, ಶಾಮ, ಶರಣಬಸಪ್ಪ, ಬೀರಪ್ಪ, ಉಮರ ಪಟೇಲ, ಪ್ರವೀಣ, ಸಂಗಮೇಶ ಹಾಗೂ ಜಗದೀಶ ಭಾಗವಹಿಸಿದ್ದರು. ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಶ್ಲಾಘಿಸಿದ್ದಾರೆ.



