ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಅಧಿಕೃತ ಹೆಸರು ಹಾಗೂ ಚಿಹ್ನೆಯನ್ನು ಭಾರತೀಯ ಚುನಾವಣಾ ಆಯೋಗವು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡ ಆದೇಶಕ್ಕೆ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಕುರಿತು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ದೇಶದಲ್ಲಿ ವಿರೋಧ ಪಕ್ಷಗಳನ್ನು ಬಗ್ಗುಬಡಿಯಲು ಒಂದು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಒಂದೇ ಪ್ಯಾಟರ್ನ್‌ನಲ್ಲಿ ವಿಪಕ್ಷಗಳ ಬೇಟೆ
ಮೊದಲು ಮಹಾರಾಷ್ಟ್ರದ ಶಿವಸೇನೆ, ಆಮೇಲೆ ಎನ್‌ಸಿಪಿ, ಈಗ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್. ಪ್ರತಿ ಬಾರಿಯೂ ಒಂದೇ ರೀತಿಯ ಪ್ಯಾಟರ್ನ್ ಬಳಕೆಯಾಗುತ್ತಿದೆ. ಬಿಜೆಪಿ ಮತ್ತು ಚುನಾವಣಾ ಆಯೋಗ ಜತೆಯಾಗಿ ಸೇರಿಕೊಂಡು ಒಂದು ಪಕ್ಷವನ್ನು ಒಡೆಯುತ್ತವೆ, ಆಮೇಲೆ ಅದರ ಚುನಾವಣಾ ಚಿಹ್ನೆಯನ್ನು ಕಿತ್ತುಕೊಳ್ಳುತ್ತವೆ. ಇಡೀ ಪಕ್ಷವನ್ನೇ ಕದಿಯುವ ಶಕ್ತಿ ಇವರಿಗಿರುವಾಗ, ದೇಶದ ಕೋಟ್ಯಂತರ ಜನರ ಮತಗಳನ್ನು ಕಳ್ಳತನ ಮಾಡುವುದು ಇವರಿಗೆ ದೊಡ್ಡ ವಿಷಯವೇನಲ್ಲ. ಮೊದಲು ವೋಟ್ ಕಳ್ಳತನ, ಆಮೇಲೆ ಸರ್ಕಾರಗಳ ಕಳ್ಳತನ, ಈಗ ಪಕ್ಷಗಳ ಕಳ್ಳತನ, ಇವೆಲ್ಲವೂ ನಮ್ಮ ದೇಶದ ಪ್ರಜಾಪ್ರಭುತ್ವದ ಕುಸಿತದ ಸಂಕೇತಗಳಾಗಿವೆ ಎಂದು ಕಿಡಿಕಾರಿದ್ದಾರೆ.
ಇದು ಬರೀ ಮಮತಾ ಬ್ಯಾನರ್ಜಿ ಹೋರಾಟವಲ್ಲ
ಚುನಾವಣಾ ಆಯೋಗವು ಜನರ ತೀರ್ಪನ್ನು ರಕ್ಷಿಸುವ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಮರೆತುಬಿಟ್ಟಿದೆ. ಜನರ ತೀರ್ಪನ್ನು ಉಲ್ಟಾ ಮಾಡುವ ಶಕ್ತಿಗಳಿಗೆ ಆಯೋಗವೇ ಸಹಾಯ ಮಾಡುತ್ತಿದೆ ಎಂದು ಅವರು ದೂರಿದ್ದಾರೆ. ಮುಂದುವರಿದು, ಈ ಹೋರಾಟ ಬರೀ ಮಮತಾ ಬ್ಯಾನರ್ಜಿ ಅವರೊಬ್ಬರದ್ದೇ ಅಲ್ಲ. ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆಯಬೇಕು ಎಂದು ಬಯಸುವ ಪ್ರತಿಯೊಂದು ರಾಜಕೀಯ ಪಕ್ಷ ಹಾಗೂ ಪ್ರತಿಯೊಬ್ಬ ಮತದಾರನ ಹೋರಾಟ ಇದಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಕೇಜ್ರಿವಾಲ್ ವ್ಯಂಗ್ಯದ ವಾಗ್ದಾಳಿ
ಇತ್ತ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೂಡ ತಮ್ಮ ಪೋಸ್ಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. ಮುಂಬರುವ ಅ. 6ರ ನಂದಿಗ್ರಾಮ ಮತ್ತು ರೆಜಿನಗರ ಉಪಚುನಾವಣೆಯ ಹೊತ್ತಲ್ಲೇ ಈ ಆದೇಶ ಬಂದಿರುವುದನ್ನು ಪ್ರಶ್ನಿಸಿರುವ ಅವರು, ಇದು ದೇಶಕ್ಕೆ ಮೋದಿಜಿಯವರ ಜನ್ಮದಿನದ ಉಡುಗೊರೆಯೇ? ಈ ರೀತಿಯಾಗಿ ಅವರು ಚುನಾವಣೆಗಳನ್ನು ಗೆಲ್ಲಲು ಹೊರಟಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಗುರುವಾರ ಹೊಸ ದೆಹಲಿಯ ನಿರ್ವಾಚನ ಸದನದಲ್ಲಿ ನಡೆದ ಸುದೀರ್ಘ ವಿಚಾರಣೆಯ ಬಳಿಕ, ಅರೂಪ್ ರಾಯ್ ಅವರ ಬಂಡಾಯ ಬಣ ಮತ್ತು ಮಮತಾ ಬ್ಯಾನರ್ಜಿ ಅವರ ಮೂಲ ಬಣ ಎರಡಕ್ಕೂ ಚುನಾವಣಾ ಆಯೋಗವು ‘ಟಿಎಂಸಿ’ ಹೆಸರಾಗಲಿ ಅಥವಾ ಅದರ ಅಧಿಕೃತ ಚಿಹ್ನೆಯನ್ನಾಗಲಿ ಬಳಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.



