ಲಕ್ನೋದಿಂದ 6 ದಿನಗಳ ಕಾಲ್ನಡಿಗೆ: ಬಾಲಕ ರಾಮನ ಕಂಡು ಪೂಜಿಸಿದ 350 ಮಂದಿ ಮುಸ್ಲಿಂ ಭಕ್ತರು!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಗೊಂಡ ಬಾಲರಾಮನ ದರುಶನಕ್ಕೆ 350 ಮಂದಿ ಮುಸ್ಲಿಂ ಭಕ್ತರು ಲಕ್ನೋದಿಂದ 6 ದಿನಗಳ ಕಾಲ ಪಾದಯಾತ್ರೆ ನಡೆಸಿದ್ದಾರೆ. ಈ ಮೂಲಕ ಅಯೋಧ್ಯೆಗೆ ತಲುಪಿ ಬಾಲಕ ರಾಮನಿಗೆ ಪೂಜೆ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಬೆಂಬಲಿತ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ನೇತೃತ್ವದ ಗುಂಪು ಜನವರಿ 25 ರಂದು ಲಕ್ನೋದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿತು ಎಂದು MRM ನ ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ಬುಧವಾರ ಹೇಳಿದ್ದಾರೆ.

350 ಮಂದಿ ಮುಸ್ಲಿಂ ಭಕ್ತರ ಗುಂಪು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಾ ಕೊರೆಯುವ ಚಳಿಯ ನಡುವೆಯೇ ಸುಮಾರು 150 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಅಯೋಧ್ಯೆಗೆ ತಲುಪಿದೆ. ಈ 6 ದಿನಗಳಲ್ಲಿ ಪ್ರತಿ 25 ಕಿ.ಮೀ ಬಳಿಕ ರಾತ್ರಿ ವೇಳೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಮರುದಿನ ಬೆಳಗ್ಗೆ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದರು .

ಸವೆದ ಬೂಟುಗಳು ಮತ್ತು ದಣಿದ ಪಾದಗಳೊಂದಿಗೆ 6 ದಿನಗಳ ಬಳಿಕ ಭಕ್ತರು ಅಯೋಧ್ಯೆಯನ್ನು ತಲುಪಿದರು. ನಂತರ ರಾಮಮಂದಿರಕ್ಕೆ ತೆರಳಿ ಹೊಸದಾಗಿ ಪ್ರತಿಷ್ಠಾಪಿಸಲಾದ ರಾಮಲಲ್ಲಾ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ಮುಸ್ಲಿಂ ಆರಾಧಕರ ಈ ಕಾರ್ಯವು ಏಕತೆ, ಸಮಗ್ರತೆ, ಸಾರ್ವಭೌಮತೆ ಮತ್ತು ಸಾಮರಸ್ಯದ ಸಂದೇಶವನ್ನು ರವಾನಿಸುತ್ತದೆ ಎಂದು ಸಯೀದ್ ಹೇಳಿದರು.

ರಾಮಲಲ್ಲಾನ ದರ್ಶನ ಪಡೆದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ MRM ಸಂಚಾಲಕ ರಾಜಾ ರಯೀಸ್ ಮತ್ತು ಗುಂಪಿನ ನೇತೃತ್ವ ವಹಿಸಿದ್ದ ಪ್ರಾಂತೀಯ ಸಂಯೋಜಕ ಶೇರ್ ಅಲಿ ಖಾನ್ ಅವರು, ಭಗವಾನ್ ರಾಮನು ಎಲ್ಲರಿಗೂ ಪೂರ್ವಜ ಎಂದು ಬಣ್ಣಿಸಿದರು. ಅಲ್ಲದೇ ಯಾವುದೇ ಧರ್ಮವು ಇತರರಿಗೆ ಟೀಕೆ, ಅಪಹಾಸ್ಯ ಅಥವಾ ತಿರಸ್ಕಾರವನ್ನು ಕಲಿಸುವುದಿಲ್ಲ ಎಂದು ಅವರು ಒತ್ತಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!