BIG BREAKING | ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ.

ರಾಂಚಿ ನಿವಾಸದಲ್ಲಿ ಕೇಂದ್ರೀಯ ಸಂಸ್ಥೆಯಿಂದ 7 ಗಂಟೆಗಳ ಕಾಲ ವಿಚಾರಣೆಯ ನಂತರ ಅವರನ್ನು ಬಂಧಿಸಲಾಗಿದೆ. ಇದಕ್ಕೆ ಮೊದಲು ಮುನ್ನೆಚ್ಚರಿಕೆ ಕ್ರಮವಾಗಿ ಸಿಎಂ ನಿವಾಸ ಮತ್ತು ರಾಜಭವನದ ಹೊರಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ.

ಮುಖ್ಯಮಂತ್ರಿ ಸ್ಥಾನದಲ್ಲಿರುವ ಕಾರಣ ಬಂಧನಕ್ಕೂ ಮೊದಲು ರಾಜ್ಯಪಾಲರ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ ಇಡಿ ಅಧಿಕಾರಿಗಳು ಎಲ್ಲಾ ಅನುಮತಿ ಪತ್ರದೊಂದಿಗೆ ಸೊರೆನ್ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿ ಇದೀಗ ಬಂಧಿಸಿದ್ದಾರೆ.

ಜಾರ್ಖಂಡ್ ಮುಕ್ತಿ ಮೋರ್ಚಾದ ಪ್ರಮುಖ ನಾಯಕ ಹೇಮಂತ್ ಸೊರೆನ್ ಬಂಧನ ಜಾರ್ಖಂಡ್‌ನಲ್ಲಿ ತಲ್ಲಣ ಸೃಷ್ಟಿಸಿದೆ. ಒಂದೆಡೆ ಹೇಮಂತ್ ಸೊರೆನ್ ವಿಚಾರಣೆ ನಡೆಯುತ್ತಿದ್ದಂತೆ ಇತ್ತ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಸೇರಿದಂತೆ ಮೈತ್ರಿ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ನಡೆಸಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ವಾನುತಮತದಿಂದ ಚಂಪಾಯ್ ಸೊರೆನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಶೀಘ್ರದಲ್ಲೇ ಚಂಪಾಯ್ ಸೊರೆನ್ ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಹೇಮಂತ್ ಸೊರೆನ್ ಪತ್ನಿ ಕಲ್ಪನಾ ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಇದಕ್ಕೆ ಕುಟುಂಬ ಹಾಗೂ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಚಂಪಾಯ್ ಸೊರೆನ್ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!