ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಹಾರಹಕ್ಕೆಂದು ತೆರಳಿದ ವೇಳೆ ಡ್ಯಾಂ ನೀರಿನಲ್ಲಿ ಮುಳುಗಿ ಆರು ವಿದ್ಯಾರ್ಥಿಗಳು ಮಂಗಳವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಮೌಂಟ್ ಶಾಲೆಯಲ್ಲಿ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಎಂದಿನಂತೆ ಇಂದೂ ಕೂಡ ಶಾಲೆಗೆಂದು ಮನೆಯಿಂದ ತೆರಳಿದ್ದರು. ಮಾರ್ಗಮಧ್ಯೆ ಹಜಾರಿಬಾಗ್‌ನಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಲೋಟ್ವಾ ಅಣೆಕಟ್ಟೆಗೆ ಸ್ನಾನ ಮಾಡಲೆಂದು ತೆರಳಿದ್ದಾರೆ. ಈ ವೇಳೆ ಓರ್ವ ನೀರಿನ ಆಳಕ್ಕಿಳಿದಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಇತರ 5 ಸ್ನೇಹಿತರು ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನೀರಿಗೆ ಧುಮುಕದೆ ಹೊರಗೆ ಉಳಿದಿದ್ದ ವಿದ್ಯಾರ್ಥಿಯೊಬ್ಬ ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ. ಮಕ್ಕಳ ರಕ್ಷಣೆಗಾಗಿ ಸ್ಥಳೀಯರು ನೀರಿಗಿಳಿದಿದ್ದಾರೆ. ಈ ವೇಳೆ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.
ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಶೇಖ್ ಭಿಖಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ಮನೋಜ್ ರತನ್ ಚೋಥೆ ತಿಳಿಸಿದ್ದಾರೆ.
ಮೃತರನ್ನು ರಜನೀಶ್ ಪಾಂಡೆ, ಸುಮಿತ್ ಕುಮಾರ್, ಮಯಾಂಕ್ ಸಿಂಗ್, ಪ್ರವೀಣ್ ಗೋಪೆ, ಇಶಾನ್ ಸಿಂಗ್ ಮತ್ತು ಶಿವಸಾಗರ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಸಾವಿಗೆ ಜಾರ್ಖಂಡ್ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಂತಾಪ ಸೂಚಿಸಿದ್ದಾರೆ.