ಹೊಸದಿಗಂತ ವರದಿ ಅಂಕೋಲಾ:
ಮದ್ಯಪಾನ ಮಾಡಿ ಲಾರಿ ಚಲಾಯಿಸಿ ಬೋರವೆಲ್ ಲಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನಿಗೆ ಅಂಕೋಲಾ ನ್ಯಾಯಾಲಯ 6 ಸಾವಿರ ರೂಪಾಯಿ ದಂಡ ವಿಧಿಸಿದೆ.
ಮಹಾರಾಷ್ಟ್ರ ಮೂಲದ ಲಾರಿ ಚಾಲಕ ನಾಮದೇವ ಗೋವಿಂದ ಎಂಬಾತ ಮಾರ್ಚ್ 11 ರಂದು ಮದ್ಯದ ನಶೆಯಲ್ಲಿ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಅತಿ ವೇಗ ಮತ್ತು ಅಜಾಗರೂಕತೆಯಿಂದ
ಲಾರಿ ಚಲಾಯಿಸಿಕೊಂಡು ಬಂದು ಅಗಸೂರು ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಎದುರಿನಿಂದ ಬರುತ್ತಿದ್ದ ಬೋರವೆಲ್ ಲಾರಿಗೆ ಡಿಕ್ಕಿ ಹೊಡೆದು ತಾನು ಗಾಯಗೊಂಡಿದ್ದಲ್ಲದೇ ಎರಡೂ ಲಾರಿಗಳು ಜಖಂ ಆಗಲು ಕಾರಣನಾಗಿದ್ದ.
ಈ ಕುರಿತು ಬೋರವೆಲ್ ಲಾರಿ ಚಾಲಕ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಿಂದ ಅಂಕೋಲಾ ಪೊಲೀಸ್ ಠಾಣಾ ಸಿ.ಆರ್. ನಂ 50/2022 ಐ.ಪಿ.ಸಿ ಕಲಂ 279,337 ಮತ್ತು ಮೋಟಾರು ವಾಹನಗಳ ಕಾಯ್ದೆ ಕಲಂ 185 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿತ ಚಾಲಕನಿಗೆ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದು ಚಾಲಕನ ವಾಹನ ಚಲಾವಣೆ ಪರವಾನಗಿಯನ್ನು ಸಹ ಅಮಾನತ್ತು ಮಾಡಲು ಸಾರಿಗೆ ಅಧಿಕಾರಿಗಳಿಗೆ ಶಿಪಾರಸ್ಸು ಮಾಡಲಾಗುವುದು ಎಂದು ಅಂಕೋಲಾ ಪೊಲೀಸ್ ನಿರೀಕ್ಷಕ ಜಾಕ್ಸನ್ ಡಿಸೋಜ ತಿಳಿಸಿದ್ದಾರೆ.