ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭಿವಿಸಿರು ರಣಭೀಕರ ಪ್ರವಾಹದಲ್ಲಿ ಅಪಾರ ಪ್ರಮಾಣದ ಸಾವು ನೋವು ಉಂಟಾಗಿದ್ದು, ಹಲವು ಜನರು ನಾಪತ್ತೆಯಾಗಿದ್ದಾರೆ. ಅಲ್ಲಿನ ಭೂಕುಸಿತಕ್ಕೆ ನೂರಾರು ಮನೆಗಳು ನೆಲಸಮವಾಗಿದೆ. ಇದರ ನಡುವೆ ಪವಾಡಸಾದೃಶ್ಯ ಎಂಬಂತೆ ಸತತ 60 ಗಂಟೆಗಳ ಕಾಲ ಮಣ್ಣಿನಲ್ಲಿ ಸಿಲುಕಿದ್ದ 6 ವರ್ಷದ ಪುಟ್ಟ ಬಾಲಕಿ ಮನಿಷಾ ಸಾವನ್ನು ಗೆದ್ದು ಬಂದಿರುವ ಘಟನೆ ನಡೆದಿದೆ.
ಕ್ಷಣಕ್ಷಣಕ್ಕೂ ಹೆಚ್ಚಿದ ಆತಂಕ
ದುರಂತ ಸಂಭವಿಸಿ ಮೂರು ದಿನಗಳು ಕಳೆಯುತ್ತಾ ಬಂದಿದ್ದವು. ಆ ಕಡುಗತ್ತಲಲ್ಲಿ, ಕಲ್ಲು-ಮಣ್ಣುಗಳ ರಾಶಿಯ ಅಡಿಯಲ್ಲಿ ಸಿಲುಕಿದ್ದ ಮಗು ಬದುಕಿರುತ್ತದೆ ಎಂಬ ಆಸೆ ಯಾರಲ್ಲೂ ಇರಲಿಲ್ಲ. ಆದರೆ, ರಕ್ಷಣಾ ಸಿಬ್ಬಂದಿ ಮಾತ್ರ ತಮ್ಮ ಪ್ರಯತ್ನವನ್ನು ಕೈಬಿಟ್ಟಿರಲಿಲ್ಲ. ಸತತವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ತಂಡಕ್ಕೆ ಇದ್ದಕ್ಕಿದ್ದಂತೆ ಕಲ್ಲುಗಳ ಸಂದಿನಿಂದ ಸಣ್ಣ ಧ್ವನಿಯೊಂದು ಕೇಳಿಸಿತು. ಅದು ಬಾಲಕಿ ಮನಿಷಾ ಸಹಾಯಕ್ಕಾಗಿ ಕರೆಯುತ್ತಿದ್ದ ಧ್ವನಿಯಾಗಿತ್ತು. ಆ ಧ್ವನಿ ಕೇಳಿದ ತಕ್ಷಣ ರಕ್ಷಣಾ ಸಿಬ್ಬಂದಿಗೆ ಹೊಸ ಭರವಸೆ ಮೂಡಿತು.
ಯುದ್ಧೋಪಾದಿಯಲ್ಲಿ ನಡೆದ ರಕ್ಷಣೆ
ಒಂದು ಕ್ಷಣವೂ ತಡಮಾಡದ ಸಿಬ್ಬಂದಿ, ಅತ್ಯಂತ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ. ಸಣ್ಣ ತಪ್ಪು ಸಂಭವಿಸಿದರೂ ಮಗುವಿನ ಜೀವಕ್ಕೆ ಅಪಾಯವಿತ್ತು. ಕೊನೆಗೂ ಮಣ್ಣಿನ ರಾಶಿಯಲ್ಲಿ ಉಸಿರಾಡುತ್ತಿದ್ದ ಮನಿಷಾ ಕಣ್ಣಿಗೆ ಬಿದ್ದಳು. ಅವಳನ್ನು ಸುರಕ್ಷಿತವಾಗಿ ಕೈಗೆತ್ತಿಕೊಳ್ಳುತ್ತಿದ್ದಂತೆ ಅಲ್ಲಿದ್ದವರೆಲ್ಲರ ಕಣ್ಣುಗಳು ತೇವವಾಗಿದ್ದವು.
ಇದನ್ನೂ ಓದಿ:
ಆಸ್ಪತ್ರೆಗೆ ದಾಖಲು
ಸುಮಾರು 60 ಗಂಟೆಗಳ ಕಾಲ ನೀರು, ಆಹಾರವಿಲ್ಲದೆ ಕತ್ತಲಲ್ಲೇ ಕಳೆದಿದ್ದರಿಂದ ಮಗು ಸುಸ್ತಾಗಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ತಕ್ಷಣವೇ ಕಠ್ಮಂಡುವಿನ ಪ್ರಮುಖ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ವೈದ್ಯರು ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಈ ರಕ್ಷಣೆಯು, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಭರವಸೆಯನ್ನು ಕಳೆದುಕೊಳ್ಳಬಾರದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.



