ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನ್ಮದಿನವನ್ನು ಕೇಕ್ ಕತ್ತರಿಸಿ, ಅದ್ದೂರಿ ಆಡಂಬರಗಳ ನಡುವೆ ಆಚರಿಸುವವರ ನಡುವೆ ಇಲ್ಲೊಬ್ಬರು ತನ್ನನ್ನು ಹೊತ್ತಿರುವ ಭೂಮಿಗೆ, ತನ್ನ ಹೆತ್ತ ತಾಯಿಯ ಹೆಸರಲ್ಲಿ ಹಸಿರು ಹೆಚ್ಚಿಸಲು ಉದ್ಯಾನ ನಿರ್ಮಿಸುತ್ತಿದ್ದಾರೆ!
ಇವರು ದಿನೇಶ್ ಹೊಳ್ಳ. ಮಂಗಳೂರಿನ ನಿವಾಸಿಯಾದ ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪಿನವರು. ಅಪ್ಪಟ ಪರಿಸರ ಪ್ರೇಮಿ. ಇದಲ್ಲದೆ ಚಿತ್ರಕಲೆ, ಗಾಳಿಪಟ ರಚನೆ ಮೂಲಕ ಈಗಾಗಲೇ ರಾಷ್ಟ್ರ ಅಂತಾರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದವರು. ಸಾಹಿತಿ, ವಿಮರ್ಶಕ, ಛಾಯಾಚಿತ್ರಕಾರ ಕೂಡಾ ಹೌದು.

ನೇತ್ರಾವತಿ ನದಿ ತಿರುವು ಯೋಜನೆ ವಿರುದ್ಧ ಪ್ರಬಲ ದನಿಯೆತ್ತುತ್ತಲೇ ಇರುವ ಇವರು, ಪಶಿಮ ಘಟ್ಟ ಉಳಿಸಿ ಆಂದೋಲನದಲ್ಲಿಯೂ ಸಕ್ರಿಯರು. ಸಹ್ಯಾದ್ರಿ ಸಂಚಯ ಮೂಲಕ ಕಾಡಿನ ರಕ್ಷಣೆಗೆ ಅಲ್ಲಿನ ಯುವ ಪೀಳಿಗೆಯನ್ನು ಇಂದಿಗೂ ಜಾಗೃತಿ ಗೊಳಿಸುತ್ತಿರುವವರು. ಇದೀಗ ಅವರು ತಮ್ಮ ಹುಟ್ಟುಹಬ್ಬವನ್ನು ಪರಿಸರ ಸಂರಕ್ಷಣೆ ಸಂದೇಶದೊಂದಿಗೆ ಸಾರ್ಥಕಗೊಳಿಸಲು ಮುಂದಾಗಿದ್ದು, ಜನ್ಮದಿನದಂದು ತನ್ನ ತಾಯಿ ಯಮುನಾ ಹೊಳ್ಳ ಅವರ ಸ್ಮರಣಾರ್ಥ 60 ಗಿಡಗಳನ್ನು ನೆಡುವ ‘ತುಳಸೀ ಯಮುನೋದ್ಯಾನ’ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಭಾರತ್ ಸಮೂಹ ಶಿಕ್ಷಣ ಸಂಸ್ಥೆ, ಸಹ್ಯಾದ್ರಿ ಸಂಚಯ, ಗ್ಲೋಬಲ್ ಗ್ರೀನ್ ಟೈಗರ್ಸ್ ಹಾಗೂ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸಹಯೋಗದಲ್ಲಿ ಪದ್ಮಶ್ರೀ ಪುರಸ್ಕೃತ ತುಳಸೀಗೌಡ ಅವರ ವೃಕ್ಷತತ್ವಗಳ ಆಶಯದಲ್ಲಿ ಮಂಗಳೂರಿನ ಹೊರವಲಯ ಉಳ್ಳಾಲದ ಮಾಸ್ತಿಕಟ್ಟೆಯ ಭಾರತ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಾಳೆ (ಜು.15) ಬೆಳಗ್ಗೆ 10 ಗಂಟೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ವೃಕ್ಷಸಂರಕ್ಷಕ ಮಾಧವ ಉಳ್ಳಾಲ್ ಅವರ ನೇತೃತ್ವವಿದೆ.

ಈ ಕಾರ್ಯಕ್ರಮದಲ್ಲಿ ಭಾರತ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಯಶವಂತ ಅಮೀನ್, ಸಂಚಾಲಕ ರೋಹಿದಾಸ್ ಬಂಗೇರ, ಎನ್‌ಇಸಿಎಫ್ ಸ್ಥಾಪಕ, ಪ್ರಧಾನ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಹಾಗೂ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯದರ್ಶಿ ಜಯಪ್ರಕಾಶ್ ಎಕ್ಕೂರು ಭಾಗಿಯಾಗಲಿದ್ದಾರೆ. ಪರಿಸರ ಪ್ರೇಮಿಗಳಾದ ಪಿ. ಪದ್ಮನಾಭ ರಾವ್, ರಾಕೇಶ್ ಬೋಳಾರ್, ಹರೀಶ್ ಅಡ್ಯಾರ್ ಅವರು ಸಾಥ್ ನೀಡಲಿದ್ದಾರೆ.
ಪ್ರತಿಯೊಬ್ಬರೂ ಹಸಿರು ಉಳಿಸುವ ಸಂಕಲ್ಪ ಕೈಗೊಳ್ಳಬೇಕು, ಗಿಡಗಳನ್ನು ಕೇವಲ ನೆಟ್ಟರೆ ಸಾಲದು, ದೇವರಂತೆ ಪೂಜಿಸಿ ಪ್ರೀತಿಯಿಂದ ಬೆಳೆಸುವುದೂ ಮುಖ್ಯ. ಆಗ ಮಾತ್ರ ಅವು ಮುಂದಿನ ಪೀಳಿಗೆಗೆ ನೆರಳಾಗುತ್ತವೆ ಎನ್ನುವ ಹೊಳ್ಳರು, ಪ್ರತಿಯೊಬ್ಬರೂ ಅವರವರ ಹುಟ್ಟು ಹಬ್ಬಕ್ಕೆ ಗಿಡ ನೆಟ್ಟು ಸಾಕಿ ಸಲಹಿದರೆ ಇಡೀ ದೇಶವೇ ಹಸಿರು ಕಂಗೊಳಿಸಿ ಬರಗಾಲ, ತಾಪ, ಪ್ರಾಕೃತಿಕ ದುರಂತಗಳಿಲ್ಲದೆ ಸಂತಸಗಳ ಮೂಟೆಯನ್ನೇ ಕಟ್ಟಿಕೊಳ್ಳಬಹುದು ಎಂಬ ಕಾಳಜಿಯ ಸಂದೇಶವನ್ನೂ ನೀಡಿದ್ದಾರೆ. ಈ ಮೂಲಕ ಜನ್ಮ ದಿನದ ಸಂಭ್ರಮವನ್ನು ‘ಹೆತ್ತ, ಹೊತ್ತ’ ಅಮ್ಮಂದಿರಿಗೆ ಅರ್ಪಿಸುವ ಮೂಲಕ ಮೇಲ್ಪಂಕ್ತಿಯಾಗಿದ್ದಾರೆ.



