68,000 ಅಕ್ರಮ ಆಸ್ತಿಗಳು, 1.20 ಲಕ್ಷ ಧ್ವನಿವರ್ಧಕಗಳ ತೆರವು- ನೂರು ದಿನದ ಆಡಳಿತ ಪೂರೈಸಿದ ಯೋಗಿ ಹಂಚಿಕೊಂಡ ಅಂಕಿಅಂಶಗಳಿಲ್ಲಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಎರಡನೇ ಬಾರಿಗೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ಆಡಳಿತ ನಡೆಸಿದ್ದು ಇಂದು ನೂರು ದಿನಗಳನ್ನು ಪೂರೈಸಿದೆ. ಈ ಕುರಿತು ವರದಿಯೊಂದನ್ನು ಬಿಡುಗಡೆ ಗೊಳಿಸಿದ ಸಿಎಂ ಯೋಗಿ “ಕುಶಾಶನ್” (ದುರಾಡಳಿತ) ತೊಡೆದುಹಾಕುವ ಮೂಲಕ “ಸುಶಾಶನ್” (ಉತ್ತಮ ಆಡಳಿತ) ಸ್ಥಾಪಿಸಿರುವುದಾಗಿ ಹೇಳಿದ್ದಾರೆ. ಈ ನೂರು ದಿನಗಳಲ್ಲಿ ಏನೆಲ್ಲಾ ಸಾಧಿಸಲಾಗಿದೆ ಎಂಬುದರ ಕುರಿತು ಅವರು ಹಂಚಿಕೊಂಡಿರುವ ಕೆಲ ಆಸಕ್ತಿದಾಯಕ ಅಂಕಿ ಅಂಶಗಳ ವಿವರ ಇಲ್ಲಿದೆ.

  • ಪ್ರಸ್ತುತ ಸರ್ಕಾರದ ಕಾರ್ಯನಿರ್ವಹಣೆಯನ್ನು ಮುಖ್ಯ 10 ವಿಭಾಗಗಳಾಗಿ ಹಂಚಿಕೊಳ್ಳಲಾಗಿದ್ದು ಕೃಷಿ, ಕೈಗಾರಿಕೆ, ಸಾಮಾಜಿಕ ಭದ್ರತೆ, ವೈದ್ಯಕೀಯ ಮತ್ತು ಆರೋಗ್ಯ, ನಗರಾಭಿವೃದ್ಧಿ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ, ಶಿಕ್ಷಣ ಮತ್ತು ಆದಾಯ ಮತ್ತು ಕಾನೂನು ಎಂಬ ವಲಯಗಳಾಗಿ ವಿಭಾಗಿಸಲಾಗಿದೆ.
  • ಇನ್ನು ಸ್ವತಃ ಯೋಗಿಯವರೇ ನಿರ್ವಹಿಸುತ್ತಿರುವ ಗೃಹ ಲಾಖೆಯು ಸಾಮಾಜಿಕ ಭದ್ರತೆಗೆ ಹೆಚ್ಚಿನ ಪ್ರಾಶಸ್ತ್ಯಕೊಟ್ಟಿದೆ. ಒಟ್ಟು 16,158 ಅಪರಾಧಿಗಳನ್ನು ಗುರುತಿಸಲಾಗಿದ್ದು 83,721 ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರತಿ ಪೋಲೀಸ್‌ ಠಾಣೆಯಲ್ಲಿ ಸೈಬರ್‌ ಡೆಸ್ಕ್‌ ಸ್ಥಾಪನೆ, 30 ಹೊಸ ಅಗ್ನಿಶಾಮಕ ಠಾಣೆಗಳಿಗೆ ಅನುಮೋದನೆ ಮತ್ತು 30 ಅಗ್ನಿಶಾಮಕ ಠಾಣೆಗಳ ನಿರ್ಮಾಣ ಮಾಡಲಾಗಿದೆ.
  • ಅಪರಾಧಿಗಳು ಮತ್ತು ಮಾಫಿಯಾಗೆ ಸೇರಿದ 844 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶ, 68,000 ಕ್ಕೂ ಹೆಚ್ಚು ಅತಿಕ್ರಮಿತ ಅಕ್ರಮ ಆಸ್ತಿ ತೆರವು, 1.20 ಲಕ್ಷಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ.
  • ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ವಲಯದಲ್ಲಿ ಸುಮಾರು 2 ಲಕ್ಷ ಕರಕುಶಲಕರ್ಮಿಗಳು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ 16,000 ಕೋಟಿ ರೂ.ಗಳ ಸಾಲವನ್ನು ವಿತರಣೆ ಮಾಡಲಾಗಿದೆ.
  • 100 ದಿನಗಳಲ್ಲಿ 10,000 ಯುವಕರಿಗೆ ಉದ್ಯೋಗ ನೀಡಿಕೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪದಕ ವಿಜೇತ ಕ್ರೀಡಾ ಪಟುಗಳಿಗೆ ಸರ್ಕಾರಿ ಉದ್ಯೋಗದ ವ್ಯವಸ್ಥೆ ಕಲ್ಪಿಸಲಾಗಿದೆ.
  • ಕೃಷಿ ಕ್ಷೇತ್ರಕ್ಕೂ ಉತ್ತೇಜನ ಕಬ್ಬು ರೈತರ ಬಾಕಿ ಪಾವತಿಗೆಂದೇ 12,537 ಕೋಟಿ ರೂ. ಹಣ ವ್ಯಯಿಸಲಾಗಿದೆ.
  • ಯಮುನಾ ಎಕ್ಸ್‌ಪ್ರೆಸ್‌ವೇ ಪ್ರಾಧಿಕಾರದಿಂದ ವೈದ್ಯಕೀಯ ಸಾಧನ ಉದ್ಯಾನವನವನ್ನು ಸ್ಥಾಪನೆ, ಎಕ್ಸ್‌ಪ್ರೆಸ್‌ವೇಗಳ ಉದ್ದಕ್ಕೂ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ. ಆಗ್ರಾ, ಕಾನ್ಪುರ ಮತ್ತು ಗೋರಖ್‌ಪುರದಲ್ಲಿ ಫ್ಲಾಟ್ ಫ್ಯಾಕ್ಟರಿ ಸಂಕೀರ್ಣ ಯೋಜನೆಗೆ ಬಿಡುಗಡೆ ಹೊಸ ಗ್ರೀನ್‌ಫೀಲ್ಡ್ ನೀತಿ ಜಾರಿಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!