ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲಂಬಿಯಾದ ಪಶ್ಚಿಮ ಭಾಗದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. 7.4 ತೀವ್ರತೆಯ ಭೂಕಂಪದಿಂದ ಹಲವು ಕಟ್ಟಡಗಳು ಕುಸಿದು, ಅವಶೇಷಗಳಡಿ ಜನರು ಸಿಲುಕಿದ್ದಾರೆ. ಈವರೆಗೆ 47 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ.
107 ಕಿ.ಮೀ ಆಳದಲ್ಲಿ ಭೂಕಂಪ
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಭೂಕಂಪದ ಕೇಂದ್ರಬಿಂದು ಚೋಕೋ ಪ್ರದೇಶದ ಸ್ಯಾನ್ ಜೋಸ್ ಡೆಲ್ ಪಾಲ್ಮಾರ್ ಸಮೀಪದಲ್ಲಿತ್ತು. ಸುಮಾರು 4,800 ಜನಸಂಖ್ಯೆ ಹೊಂದಿರುವ ಈ ಪ್ರದೇಶ ಬೊಗೋಟಾದಿಂದ ಸುಮಾರು 400 ಕಿ.ಮೀ ದೂರದಲ್ಲಿದೆ. ಭೂಕಂಪವು ಭೂಮಿಯ 107 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡಗಳು ಕುಸಿತ, ಜನರಲ್ಲಿ ಆತಂಕ
ಭೂಕಂಪದ ಪರಿಣಾಮ ಪೆರೇರಾ, ಕಾಲಿ ಮತ್ತು ಕ್ವಿಬ್ಡೊ ಸೇರಿದಂತೆ ಹಲವು ನಗರಗಳಲ್ಲಿ ಮನೆಗಳು ಹಾಗೂ ಸಣ್ಣ ಕಟ್ಟಡಗಳಿಗೆ ಹಾನಿಯಾಗಿದೆ. ಪೆರೇರಾ ನಗರದಲ್ಲೇ 18 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮೇಯರ್ ಮಾಹಿತಿ ನೀಡಿದ್ದಾರೆ. ಮನಿಜಾಲೆಸ್ ನಗರದಲ್ಲಿರುವ ಐತಿಹಾಸಿಕ ನಿಯೋ-ಗಾಥಿಕ್ ಕ್ಯಾಥೆಡ್ರಲ್‌ನ ಒಂದು ಗೋಪುರವೂ ಕುಸಿದಿದೆ.
ಇದನ್ನೂ ಓದಿ:
ಆರು ವಿಮಾನ ನಿಲ್ದಾಣಗಳಲ್ಲಿ ಸೇವೆ ಸ್ಥಗಿತ
ಭೂಕಂಪದಿಂದ ಪಶ್ಚಿಮ ಕೊಲಂಬಿಯಾದ ಆರು ವಿಮಾನ ನಿಲ್ದಾಣಗಳಿಗೂ ಹಾನಿಯಾಗಿದೆ. ಪೆರೇರಾ, ಮನಿಜಾಲೆಸ್, ಕ್ವಿಬ್ಡೊ, ಅರ್ಮೇನಿಯಾ, ಕಾರ್ಟಾಗೊ ಮತ್ತು ಬುಯೆನವೆಂಚುರಾ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಂಸ್ಥೆ ತಿಳಿಸಿದೆ.
ಸರ್ಕಾರದಿಂದ ತುರ್ತು ರಕ್ಷಣಾ ಕಾರ್ಯ
ಭೂಕಂಪದ ಬಳಿಕ ಕೊಲಂಬಿಯಾದ ನೂತನ ಅಧ್ಯಕ್ಷ ಅಬೆಲಾರ್ಡೊ ಡೆ ಲಾ ಎಸ್ಪ್ರಿಯೆಲ್ಲಾ ಅವರು ಸ್ಯಾನ್ ಜೋಸ್ ಡೆಲ್ ಪಾಲ್ಮಾರ್‌ನ ತುರ್ತು ಪರಿಸ್ಥಿತಿಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದಾರೆ. ರಕ್ಷಣಾ ತಂಡಗಳು ಅವಶೇಷಗಳಡಿ ಸಿಲುಕಿರುವವರಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.



