ಕಬಿನಿ ಜಲಾಶಯದಿಂದ ನದಿಗೆ 70 ಸಾವಿರ ಕ್ಯೂಸೆಕ್ ನೀರು ಹರಿವು: ನಂಜನಗೂಡಿನ ಪರಶುರಾಮ ದೇವಸ್ಥಾನಕ್ಕೆ ಜಲ ದಿಗ್ಬಂಧನ

ಹೊಸದಿಗಂತ ವರದಿ,ಮೈಸೂರು:

ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿರುವ ಕಾರಣ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಗುರುವಾರ ಜಲಾಶಯದಿಂದ ನದಿಗೆ ಬರೋ ಬರೀ ೭೦ ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದ್ದು, ಕಪಿಲಾ ನದಿಯಲ್ಲಿ ಜಲಪ್ರವಾಹವುಂಟಾಗಿದೆ.

ದಕ್ಷಿಣ ಕಾಶಿ ನಂಜನಗೂಡಿನಲ್ಲಿರುವ ಪರಶುರಾಮ ದೇವಸ್ಥಾನ ಮುಳುಗಡೆ ಆಗಿದೆ. ದೇವಸ್ಥಾನದ ಎರಡು ಮಂಟಪಗಳು ಸಂಪೂರ್ಣ ಮುಳುಗಿದರೆ, ಹದಿನಾರು ಕಾಲು ಮಂಟಪ ಕೂಡ ಭಾಗಶಃ ಮುಳುಗಡೆ ಆಗಿದೆ. ಕಪಿಲಾ ನದಿಯಲ್ಲಿ ಪ್ರವಾಹವುಂಟಾಗಿದ್ದು, ಮನೆಗೆ ನೀರು ನುಗ್ಗುತ್ತಿರುವ ಹಿನ್ನೆಲೆಯಲ್ಲಿ ನದಿ ದಂಡೆಯ ನಿವಾಸಿಗಳು ಮನೆ ಖಾಲಿ ಮಾಡುತ್ತಿದ್ದಾರೆ. ನಂಜುoಡೇಶ್ವರಸ್ವಾಮಿ ದೇವಾಲಯದ ಸನಿಹದಲ್ಲಿರುವ ಸ್ನಾನಘಟ್ಟ, ಮುಡಿಕಟ್ಟೆ ಮುಳುಗಡೆಯಾಗಿದ್ದು, ಮೈದುಂಬಿ ಹರಿಯುತ್ತಿರುವ ಕಪಿಲೆಯನ್ನು ಕಣ್ತುಂಬಿಕೊಳ್ಳಲು ಜನ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದರು. ಇದರ ನಡುವೆ ಕಪಿಲ ನದಿಯ ಬಳಿಗೆ ತೆರಳದಂತೆ ಜನರಿಗೆ ಧ್ವನಿವರ್ಧಕದ ಮೂಲಕ ಪೊಲೀಸರು ಎಚ್ಚರಿಕೆ ನೀಡಿದರು.

ಕಪಿಲ ನದಿ ತೀರದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ಯಾವುದೇ ಕ್ಷಣದಲ್ಲಿ ಜಲಾಶಯದ ನೀರಿನ ಹೊರ ಹರಿವು ಹೆಚ್ಚಳವಾಗುವ ಸಾಧ್ಯತೆ ಇದೆ. ಆದ ಕಾರಣ, ನಂಜನಗೂಡಿನ ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದ ಇರುವಂತೆ ನಗರಸಭೆ ಸಿಬ್ಬಂದಿ ಸೂಚನೆ ನೀಡಿದ್ದಾರೆ.

ಕೇರಳದ ವಯನಾಡಿನಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ನೀರಿನ ಪ್ರಮಾಣ ಆಧರಿಸಿ, ಹೊರಹರಿವಿನ ಪ್ರಮಾಣ ಹೆಚ್ಚಳ ಮಾಡಲಾಗಿದೆ. ಒಳಹರಿವು ಇನ್ನೂ ಹೆಚ್ಚಾದರೆ ಹೊರಹರಿವು ಕೂಡ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಜಮೀನು ಜಲಾವೃತ: ನದಿ ತೀರದ ಜಮೀನುಗಳಿಗೆ ಕಪಿಲಾ ನದಿ ನೀರು ನುಗ್ಗಿ ರೈತರು ಬೆಳೆದಿರುವ ಬೆಳೆಗಳನ್ನು ಆಪೋಶನ ತೆಗೆದುಕೊಳ್ಳುತ್ತಾ ಸಾಗಿದೆ. ಅಪಾಯದ ಮಟ್ಟ ಮೀರಿ ಕಪಿಲ ನದಿ ಹರಿಯುತ್ತಿದ್ದು, ಹಲವೆಡೆ ಸೇತುವೆಗಳು ಮುಳುಗಡೆ ಆಗಿವೆ. ಇದರ ನಡುವೆ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿರುವುದನ್ನು ಲೆಕ್ಕಿಸದೆ ಸೇತುವೆ ದಾಟುವ ದುಸ್ಸಾಹಸಕ್ಕೆ ಯುವಜನ ಮುಂದಾಗುತ್ತಿದ್ದಾರೆ.

ಸುತ್ತೂರು ಸೇತುವೆ ಮುಳುಗಡೆ 
ಕಬಿನಿ ಜಲಾಶಯದಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ ೭೦ ಸಾವಿರ ಕ್ಯುಸೆಕ್‌ಗೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕಪಿಲ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಕಾಣಿಸಿಕೊಂಡಿದೆ. ಅಪಾಯದ ಮಟ್ಟ ಮೀರಿ ಕಪಿಲ ನದಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಸೇತುವೆ ಮುಳುಗಡೆ ಆಗಿದೆ. ಇದರಿಂದಾಗಿ ಸುತ್ತೂರು ಮೈಸೂರು ನಡುವಿನ ಸಂಪರ್ಕ ಕಡಿತಗೊಂಡಿದೆ. ಸುತ್ತೂರು ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!