ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳ-ಚೀನಾ ಗಡಿಯಲ್ಲಿ ಉಂಟಾಗಿರುವ ಭೀಕರ ಪ್ರವಾದಲ್ಲಿ ಸಾಕಷ್ಟು ಜನ ಪ್ರಾಣಕಳೆದುಕೊಂಡಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಇದೇ ಸಂದರ್ಭದಲ್ಲಿ ಟಿಬೆಟ್‌ನ ನ್ಯಾಲಮ್‌ನಲ್ಲಿ 70 ಪ್ರವಾಸಿಗರು ಸಿಲಿಕಿಕೊಂಡಿದ್ದು ಈ ಪೈಕಿ 35 ಕರ್ನಾಟಕದವರಾಗಿದ್ದು, ಇವರಿಗೆ ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸರ್ಕಾರದ ವಿರುದ್ಧ ಅಸಮಾಧಾನ:
ಈ ಬಗ್ಗೆ ಪ್ರವಾಸಿಗರ ತಂಡದಲ್ಲಿದ್ದ ಕೃಷ್ಣ ಎಂಬುವವರು ಮಾತನಾಡಿ, ನಾವು ಈಗಾಗಲೇ ರಾಜ್ಯ ಸಹಾಯವಾಣಿ ಫಾರಂ ಭರ್ತಿ ಮಾಡಿದ್ದೇವೆ. ನಮಗೆ ಕರೆ ಮಾಡಿ ಯಾವ ಸಹಾಯ ಬೇಕು ಎಂದು ಕೇಳಿದರು ಆಗಾ ನಾವು ನಮ್ಮನ್ನು ರಕ್ಷಣೆ ಮಾಡಿ ಎಂದು ಕೇಳಿದೆವು. ಆದರೆ ಇದುವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ ಹಾಗೂ 45 ಇಮೇಲ್ ವಿಳಾಸಗಳಿಗೆ ಸಹಾಯ ಯಾಚಿಸಿ ಸಂದೇಶಗಳನ್ನು ಕಳುಹಿಸಿದ್ದೇವೆ ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ.
ಇದನ್ನೂ ಓದಿ:
320 ಭಾರತೀಯರು ನಾಪತ್ತೆ:
ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ, ನೇಪಾಳದಲ್ಲಿ ಸುಮಾರು 320 ಭಾರತೀಯರು ನಾಪತ್ತೆಯಾಗಿದ್ದು, ಚೀನಾ ಗಡಿಯಲ್ಲಿ 400ಕ್ಕೂ ಹೆಚ್ಚು ಜನ ಸಿಲಿಕಿಕೊಂಡಿದ್ದಾರೆ. ಕರ್ನಾಟಕದ ನಿರ್ವಹಣಾ ಕೇಂದ್ರದ ಪ್ರಕಾರ, ಇದುವರೆಗೆ ರಾಜ್ಯದ 28 ಜನರ ಮಾಹಿತಿ ಲಭ್ಯವಿದ್ದು, ಇವರಲ್ಲಿ 23 ಜನ ಬೆಂಗಳೂರಿಗರಾಗಿದ್ದಾರೆ. ಉಳಿದ ಐವರು, ಮೈಸೂರು, ಧಾರವಾಡ, ಉಡುಪಿ ಹಾಗೂ ವಿಜಯನಗರದವರಾಗಿದ್ದಾರೆ ಎಂದು ತಿಳಿಸಿದೆ. ಪ್ರಸ್ತುತ ಈ ದುರಂತದಲ್ಲಿ ಸಿಲಿಕಿರುವ ಪ್ರವಾಸಿಗರು ದೆಹಲಿಯಲ್ಲಿರುವ ಸಚಿವಾಲಯ ಹಾಗೂ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ.



