75 ವಯಸ್ಸಿನ ಈಕೆ ಕಸೂತಿ ಕಲೆಯ ಪ್ರಚಾರಕಿ

ನಾಗರಾಜ್. ಕೆ

ವಂಶಪಾರಂಪರ್ಯವಾಗಿ ಅಜ್ಜಿ, ತಾಯಿಯಿಂದ ಬದುಕಿನೊಂದಿಗೆ ಬೆಸೆದು ಬಂದ ಕಸೂತಿ ಕಲೆಯು ಯುವ ಪೀಳಿಗೆಯಲ್ಲಿ ಮರೀಚಿಕೆಯಾದರೂ ತಾಂಡಾಗಳ ಹಿರಿಯ ಮಹಿಳೆಯರಲ್ಲಿ ಸುಯ್ -ದೋರಾ ಕಾಮ್ (ಸೂಜಿ ದಾರದಿಂದ ಮಾಡುವ ಗಂಟು ಹೆಣಿಕೆಯ ಕಸೂತಿ ಕಲೆ) ಇಂದಿಗೂ ಉಳಿದುಕೊಂಡಿದೆ. ಮರಿಯಮ್ಮನಹಳ್ಳಿ ತಾಂಡಾದ ಶಂಕ್ರಿಬಾಯಿ ಈ ಲಂಬಾಣಿ ಕಸೂತಿ ಕಲೆಯನ್ನು 30 ವರ್ಷಗಳಿಂದ ಕಾಯಕವಾಗಿಸಿಕೊಂಡು ಪೋಷಿಸಿಕೊಂಡು ಬಂದಿದ್ದಾರೆ.

ಶಂಕ್ರಿಬಾಯಿ ಅವರಿಗೆ ಬೆಳಗಾದರೆ ಸಾಕು ಕಸೂತಿಗೆ ಅಗತ್ಯವಾದ ದಾರ, ಸೂಜಿ, ವಿವಿಧ ಬಣ್ಣದ ದಾರಗಳು ಗಾಜಿನ ಹರಳು ಹೀಗೆ ವಿವಿಧ ಸಾಮಾನುಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು ಪಟ್ಟಣದ ಬಸ್ ನಿಲ್ದಾಣದ ಒಳಗಡೆ ಒಂದು ಮೂಲೆಯಲ್ಲಿ ಕುಳಿತುಕೊಂಡು ತಮ್ಮ ಕಸೂತಿ ಕೆಲಸ ಆರಂಭಿಸುತ್ತಾರೆ. ಬೆಳಗ್ಗೆ 10ಕ್ಕೆ ಬರುವ ಈ ತಾಯಿ ಸಂಜೆ 6ರ ವರೆಗೂ ಕಸೂತಿ ಕಾಯಕದಲ್ಲಿ ತೊಡಗಿರುವ ದೃಶ್ಯ ಸ್ಥಳೀಯರಿಗೆ ಸಾಮಾನ್ಯವಾಗಿದೆ.

ಮಾರಾಟಕ್ಕಲ್ಲದಿದ್ದರೂ ಸಾಂಪ್ರದಾಯಕ ಹಾಗೂ ಕೌಟುಂಬಿಕ ಸಭೆ, ಸಮಾರಂಭಗಳಲ್ಲಿ ಧರಿಸಲು ತಾವೇ ತಯಾರಿಸುವ ಅನಿವಾರ್ಯತೆಗೆ ಈ ಕಾಯಕದಲ್ಲಿ ತೊಡಗುವ ಲಂಬಾಣಿ ಮಹಿಳೆಯರಿಗೆ ಈ ಕುರಿತು ಮಾಹಿತಿ ಕಡಿಮೆ. ಆದರೆ ಲಂಬಾಣಿ ಮದುವೆ, ಗೋದಿ ಹಬ್ಬ, ಹೋಳಿ ಹಬ್ಬ, ದೀಪಾವಳಿ, ಸಂಭ್ರಮದಲ್ಲಿ ಸಾಂಪ್ರದಾಯಿಕ ಉಡುಗೆ ತೊಡುವುದು ಈ ಸಮೂಹದ ರೂಢಿಗತ. ಈ ಸಮೂಹದ ಹಿರಿಯ ಮಹಿಳೆಯರು ಸೀರೆ ಬದಲು ಸಾಂಪ್ರದಾಯಕವಾದ ಫೇಟಿಯಾ (ಲೆಹೆಂಗಾ), ಕಾಂಚಳಿ (ರವಿಕೆ), ಛಾಂಟಿಯಾ (ವೇಲ್) ಹಾಕಲು ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ಈ ಉಡುಪುಗಳು ದೊರೆಯದ ಕಾರಣ ತಾವೇ ಈ ಉಡುಪು, ಆಭರಣಗಳ ತಯಾರಿಕೆಯಲ್ಲಿ ತೊಡಗುವುದು ಅನಿವಾರ್ಯವಾಗಿದೆ.

ಮಹಿಳೆಯರ ಉಡುಗೆಗಳಾದ, ಫೆಟಿಯಾ, ಕಾಂಚಳಿ, ಛಾಂಟಿಯಾ ಹಾಗೂ ಆಭರಣಗಳಾದ ಮುತೈದೆಯರು ತೋಳಿಗೆ, ಕೈಗೆ ಭಲ್ಯ (ಪ್ಲಾಸ್ಟಿಕ್ ಅಥವಾ ಜಿಂಕೆ, ಸಾರಂಗ ಸೇರಿದಂತೆ ಇತರೆ ಪ್ರಾಣಿಯ ಕೊಂಬಿನಿಂದ ಮಾಡಿದ ಬಳೆ), ತಲೆಗೆ ಘುಗ್ರಿ (ಬೆಳ್ಳಿಯ ಜಡೆಕಟ್ಟು) ಟೊಪಳಿ, ಮತ್ತು ಹಾಸ್ಲೊ ಭೂರಿಯಾ ( ಮೂಗುತಿ) ಹಾಗೂ ಕೊರಳಿಗೆ ಪಾವಲಾರ್ಹಾರ ( ಬೆಳ್ಳಿಯ ನಾಲ್ಕಾಣೆ, ಎಂಟಾಣೆಗಳ ಹಾರ), ಕೈ ಮತ್ತು ಕಾಲಿನ ಬೆರಳುಗಳಿಗೆ ಕಸ್, ಅಂಗುತ್ತಾ, ಚಟಕಿ ( ಹಿತ್ತಾಳೆಯ ಉಂಗುರಗಳು) ಹೀಗೆ ಅಡಿಯಿಂದ ಮುಡಿಯವರೆಗೂ ಬಗೆಬಗೆಯ ಆಭರಣ ಧರಿಸಿಸುವುದು ಸಂಪ್ರದಾಯ. ಈ ಎಲ್ಲ ಉಡುಪುಗಳನ್ನು ಕಸೂತಿ ಕಲೆಯಿಂದ ತಯಾರಿಸಿ ಅಗತ್ಯ ಇರುವ ಸಂಪ್ರದಾಯ ಪ್ರೀತಿಸುವವರಿಗೆ, ಅದನ್ನು ಉಳಿಸಿ ಬೆಳೆಸಿಕೊಂಡು ಬರುವವರಿಗೆ ನೀಡುವ ಶಂಕ್ರಿಬಾಯಿ, ಅದರಲ್ಲೇ ನೆಮ್ಮದಿ ಕಂಡುಕೊಂಡಿದ್ದಾರೆ. ಪ್ರತಿ ತಾಂಡಾದಲ್ಲೂ ಈ ಕಸೂತಿ ಕಲೆಯ ಪ್ರಚಾರ ಹಾಗೂ ತರಬೇತಿ ನೀಡುವ ಉದ್ದೇಶ ಶಂಕ್ರಿಬಾಯಿ ಅವರಿಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!