ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 3-4 ವರ್ಷದಲ್ಲಿ ದೇಶದಲ್ಲಿ 8 ಕೋಟಿ ಹೊಸ ಉದ್ಯೋಗ ಸೃಷ್ಟಿಯಾಗಿವೆ. ಆ ಮೂಲಕ ನಕಲಿ ಸುದ್ದಿ, ವದಂತಿ ಹರಡುತ್ತಿರುವವನ್ನು ಇವು ಸುಮ್ಮನಾಗಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಬೈಗೆಶನಿವಾರ ಭೇಟಿ ನೀಡಿದ ಅವರು ಸುಮಾರು 29,400 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ, ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಪ್ರಧಾನಿ, ಉದ್ಯೋಗ ಸೃಷ್ಟಿಯ ಕುರಿತು ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ವರದಿ ನೀಡಿದೆ. ಕಳೆದ 3-4 ವರ್ಷದಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು ದೇಶದಲ್ಲಿ ಸೃಷ್ಟಿಸಲಾಗಿದೆ. ಆರ್‌ಬಿಐ ನೀಡಿದ ಈ ಅಂಕಿ-ಅಂಶಗಳು ಸುಳ್ಳು ಸುದ್ದಿ ಹರಡುವವರು, ಅಜೆಂಡಾ ಬಿತ್ತುವವರನ್ನು ಸುಮ್ಮನಾಗಿಸಿವೆ. ಯಾರು ಹೂಡಿಕೆ, ಮೂಲ ಸೌಕರ್ಯ ಹಾಗೂ ದೇಶದ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದರೋ, ಅವರೆಲ್ಲರ ಬಣ್ಣ ಈಗ ಬಯಲಾಗಿದೆ. ಇಂತಹ ಪಿತೂರಿಗಳನ್ನು ದೇಶದ ಜನ ತಿರಸ್ಕರಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಪ್ರತಿಪಕ್ಷಗಳಿಗೆ ಕುಟುಕಿದರು.
ಜನರಿಗೆ ಎನ್‌ಡಿಎ ಮೇಲೆ ಅಪಾರ ವಿಶ್ವಾಸವಿದೆ. ಎನ್‌ಡಿಎ ಸರ್ಕಾರ ಮಾತ್ರ ಸ್ಥಿರತೆಯನ್ನು ಕಾಪಾಡಲು ಸಾಧ್ಯ ಎಂದು ನಮ್ಮನ್ನು ಮೂರನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಸಣ್ಣ ಹಾಗೂ ಬೃಹತ್ ಹೂಡಿಕೆದಾರರು ನಮ್ಮ ಸರ್ಕಾರ ಮತ್ತೆ ಬಂದಿರುವುದನ್ನು ಸ್ವಾಗತಿಸಿದ್ದಾರೆ. ಮೂರನೇ ಅವಧಿಯಲ್ಲಿ ನಮ್ಮ ಕೆಲಸವು ಇನ್ನಷ್ಟು ಕ್ರಿಪ್ರವಾಗಿ ಆಗುತ್ತದೆ, ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುತ್ತದೆ ಎಂಬುದಾಗಿ ಹೇಳಿದ್ದೆ. ಅದರಂತೆ ಈಗ ವೇಗವಾಗಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿಸಿದರು.