ಭಾರತದಲ್ಲಿ ದಿನಕ್ಕೆ 80 ನವೋದ್ದಿಮೆಗಳು, ಈ ದರ ಜಗತ್ತಿನಲ್ಲೇ ಅಧಿಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತವು ನವೋದ್ದಿಮೆಗಳ ಕೇಂದ್ರವಾಗಿ ಮಾರ್ಪಡುತ್ತಿದೆ ಎಂಬುದಕ್ಕೆ ಇಂಬು ನೀಡುವಂತೆ “ದೇಶದಲ್ಲಿ ಪ್ರತಿದಿನ 80 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಗುರುತಿಸಲ್ಪಡುತ್ತಿವೆ, ಇದು ವಿಶ್ವದ ಅತಿ ಹೆಚ್ಚು ದರವಾಗಿದೆ” ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದಲ್ಲಿ 75,000 ಸ್ಟಾರ್ಟಪ್‌ಗಳು ಗುರುತಿಸಲ್ಪಟ್ಟಿವೆ ಆ ಮೂಲಕ ಭಾರತವು ಒಂದು ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಅವರು ಘೋಷಿಸಿದ್ದಾರೆ. ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) 75,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿದೆ, ಇದು ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಹೊಂದಿಕೆಯಾಗುವ ಮೈಲಿಗಲ್ಲು ಎಂದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಧಾನಿ ಮೋದಿಯವರು ದೇಶದ ಉದ್ಯಮಶೀಲತೆಯ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸ್ಟಾರ್ಟ್ಅಪ್ ಇಂಡಿಯಾ ಅಭಿಯಾನವನ್ನು 2015ರ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಘೋಷಿಷಿದ್ದರು. ನವೋದ್ದಿಮೆಗಳು ಹಾಗು ಸ್ಟಾರ್ಟ್‌ಅಪ್‌ಗಳನ್ನು ಪೋಷಿಸಲು ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸ್ಟಾರ್ಟ್‌ಅಪ್ ಇಂಡಿಯಾ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದು ಪ್ರಾರಂಭವಾದ ಆರೇ ವರ್ಷಗಳಲ್ಲಿ ಭಾರತವು ಜಗತ್ತಿನ ಮೂರನೇ ಅತಿದೊಡ್ಡ ನವೋದ್ದಿಮೆಗಳ ಪರಿಸರ ವ್ಯವಸ್ಥೆ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.

ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಆರಂಭಿಕವಾಗಿ 808 ದಿನಗಳಲ್ಲಿ ಹತ್ತು ಸಾವಿರ ಸ್ಟಾರ್ಟಪ್‌ಗಳು ಗುರುತಿಸಲ್ಪಟ್ಟವು. ಆದರೆ ನಂತರ ಈ ಬೆಳವಣಿಗೆಯು ವೇಗವನ್ನು ಪಡೆದುಕೊಂಡಿತು ಇತ್ತೀಚಿನ ಹತ್ತು ಸಾವಿರ ಸ್ಟಾರ್ಟಪ್‌ಗಳು ಕೇವಲ 156 ದಿನಗಳಲ್ಲಿ ಗುರುತಿಸಲ್ಪಟ್ಟಿವೆ. ದೇಶದಲ್ಲಿ ಪ್ರತಿದಿನ 80 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಗುರುತಿಸಲ್ಪಡುತ್ತಿವೆ, ಇದು ವಿಶ್ವದ ಅತಿ ಹೆಚ್ಚು ದರವಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಒಟ್ಟು ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳಲ್ಲಿ ಸುಮಾರು 12 ಪ್ರತಿಶತ ಐಟಿ ಸೇವೆಗಳಿಗೆ, 9 ಪ್ರತಿಶತ ಆರೋಗ್ಯ ಮತ್ತು ಜೀವ ವಿಜ್ಞಾನಕ್ಕೆ, 7 ಪ್ರತಿಶತ ಶಿಕ್ಷಣಕ್ಕೆ, 5 ಪ್ರತಿಶತ ವೃತ್ತಿಪರ ಮತ್ತು ವಾಣಿಜ್ಯ ಸೇವೆಗಳಿಗೆ ಮತ್ತು 5 ಪ್ರತಿಶತ ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿವೆ ಎಂದು ಸಚಿವಾಲಯ ಹೇಳಿದೆ.

ಭಾರತೀಯ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಿಂದ ಸುಮಾರು 7.46 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ, ಇದು ಕಳೆದ ಆರು ವರ್ಷಗಳಲ್ಲಿ ವಾರ್ಷಿಕವಾಗಿ 110 ಪ್ರತಿಶತದಷ್ಟು ಹೆಚ್ಚಳವಾಗಿದೆ. ಇದಲ್ಲದೆ, 49 ಪ್ರತಿಶತದಷ್ಟು ಸ್ಟಾರ್ಟ್‌ಅಪ್‌ಗಳು ಶ್ರೇಣಿ II ಮತ್ತು ಶ್ರೇಣಿ III ನಗರಗಳಿಂದ ಬಂದವುಗಳಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!