July 10, 2026
Friday, July 10, 2026
spot_img

ಮುಖ್ಯ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಕ್ಕೆ ಬ್ರೇಕ್: ಪ್ರತ್ಯೇಕ ವಲಯ ನಿರ್ಮಾಣಕ್ಕೆ ಸರ್ಕಾರದ ನಿರ್ಧಾರ

ಹೊಸದಿಗಂತ ವರದಿ ಬೆಳಗಾವಿ :

ರಾಜಧಾನಿ ಬೆಂಗಳೂರಿನ ಮುಖ್ಯ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡದೆ, ವ್ಯಾಪಾರಿಗಳಿಗಾಗಿ ಪ್ರತ್ಯೇಕ ವಲಯಗಳನ್ನು ಗುರುತಿಸಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ‌

ಶುಕ್ರವಾರ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಪಾಲಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಈ ನಿರ್ಧಾರ ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಯದ್ದಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಎಲ್ಲ ಶಾಸಕರ ಅಭಿಪ್ರಾಯ ಪಡೆದು, ಸಾಮೂಹಿಕ ಒಪ್ಪಿಗೆಯೊಂದಿಗೆ ಬೀದಿಬದಿ ವ್ಯಾಪಾರಿಗಳನ್ನು ಮುಖ್ಯ ರಸ್ತೆಗಳಿಂದ ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ವಿಚಾರದಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಮಾತ್ರ ಟೀಕಿಸುವುದು ಸರಿಯಲ್ಲ. ಪೊಲೀಸರು ಸೇರಿದಂತೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ನಗರದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಸುಮಾರು 60 ಸಾವಿರ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಅವರಲ್ಲಿ 30 ಸಾವಿರ ಮಂದಿ ದ್ವಿಚಕ್ರ ವಾಹನಗಳಿಗಾಗಿ ಅರ್ಜಿ ಸಲ್ಲಿಸಿದ್ದು, ಅವರಿಗೆ ವಾಹನ ಒದಗಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.

ವ್ಯಾಪಾರಿಗಳು ಸರ್ಕಾರ ನಿಗದಿಪಡಿಸಿದ ಸ್ಥಳಗಳಲ್ಲೇ ವ್ಯಾಪಾರ ನಡೆಸಬೇಕು. ಸಾರ್ವಜನಿಕ ರಸ್ತೆ ಅಥವಾ ಪಾದಚಾರಿ ಮಾರ್ಗಗಳಲ್ಲಿ ಡೇರೆ ಅಥವಾ ಟೆಂಟ್ ಹಾಕಲು ಅವಕಾಶ ಇರುವುದಿಲ್ಲ. ಪ್ರತಿದಿನ ಸಂಜೆ ವ್ಯಾಪಾರ ಮುಗಿದ ಬಳಿಕ ಸ್ಥಳವನ್ನು ಖಾಲಿ ಮಾಡಿ ಮನೆಗಳಿಗೆ ತೆರಳಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನಕ್ಕಾಗಿ ಶಾಸಕರಿಂದ ಯಾವುದೇ ಒತ್ತಡ ಇಲ್ಲ. ಪಕ್ಷದ ರಾಷ್ಟ್ರೀಯ ನಾಯಕರು ಬೆಂಗಳೂರಿಗೆ ಆಗಮಿಸಿದ ಬಳಿಕ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಆರ್‌ಎಸ್‌ಎಸ್ ಸಭೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನಿನ ನಿಯಮಾವಳಿಗಳ ಪ್ರಕಾರವೇ ಸಭೆಗೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ನಡೆಸುವಂತೆ ಶಾಸಕರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !