ಹೊಸದಿಗಂತ ವರದಿ ಬೆಳಗಾವಿ:
ಬದ್ಧತೆಯ ರಾಜಕಾರಣದ ಕೊರತೆಯಿಂದಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವಿಚಾರದಲ್ಲಿ ಹಿಂದುಳಿದ ವರ್ಗಗಳಿಗೆ ಘೋರ ಅನ್ಯಾಯ ಮಾಡಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತೀವ್ರವಾಗಿ ಆಗ್ರಹಿಸಿದರು.
ಶುಕ್ರವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಮಧುಸೂದನ ನಾಯಕ ಅವರಿಂದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವೀಕರಿಸಿದ ವರದಿಯನ್ನು ಗೌಪ್ಯವಾಗಿ ಇಡಬಾರದು. ಅದನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ, ಮುಕ್ತ ಚರ್ಚೆಗೆ ಒಳಪಡಿಸಬೇಕು” ಎಂದು ಒತ್ತಾಯಿಸಿದರು.
ಮಾತಿನ ಶೂರರಾದ ಸಿದ್ದರಾಮಯ್ಯ
”ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗೆ ತಳ್ಳಿ 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು, ಜಾತಿ ಜನಗಣತಿ ವಿಷಯದಲ್ಲಿ ಕೇವಲ ಮಾತಿನ ಶೂರರಾದರು. ಆದರೆ ಹಿಂದುಳಿದ ವರ್ಗಗಳ ಆಶೋತ್ತರಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ” ಎಂದು ಅವರು ದೂರಿದರು.
ಕಾಂಗ್ರೆಸ್ ಸರ್ಕಾರದ ನಡೆಗಳನ್ನು ಪಟ್ಟಿ ಮಾಡಿದ ಅವರು, ಸಮೀಕ್ಷೆಯ ಹಾದಿ ತಪ್ಪಿದ ಬಗೆಯನ್ನು ಹೀಗೆ ವಿವರಿಸಿದರು:
2014: ಕಾಂತರಾಜ ಆಯೋಗಕ್ಕೆ ಸಮೀಕ್ಷೆಯ ಜವಾಬ್ದಾರಿ ನೀಡಲಾಯಿತು.
ನಂತರದ ಅವಧಿ: ಜಯಪ್ರಕಾಶ ಹೆಗ್ಡೆ ಆಯೋಗಕ್ಕೆ ಇದರ ಹೊಣೆ ವಹಿಸಲಾಯಿತು.
2025: ಈ ಹಿಂದಿನ ವರದಿಗಳು ಮೂಲೆ ಸೇರಿದ ನಂತರ, ಮಧುಸೂದನ ನಾಯಕ ನೇತೃತ್ವದಲ್ಲಿ ಮತ್ತೊಂದು ಸಮೀಕ್ಷೆಯನ್ನು ಘೋಷಿಸಲಾಯಿತು.
”ಇತ್ತೀಚೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿತ್ತು. ಈ ಕಾರಣದಿಂದಾಗಿ, ಸಮೀಕ್ಷೆ ವರದಿ ಸಂಪೂರ್ಣವಾಗಿ ಸಿದ್ಧವಾಗುವ ಮುನ್ನವೇ ತರಾತುರಿಯಲ್ಲಿ ಅದನ್ನು ಸ್ವೀಕರಿಸಿ ಸಿದ್ದರಾಮಯ್ಯ ಕೈತೊಳೆದುಕೊಂಡಿದ್ದಾರೆ” ಎಂದು ಕೋಟ ಶ್ರೀನಿವಾಸ ಪೂಜಾರಿ ಗಂಭೀರವಾಗಿ ಆರೋಪಿಸಿದರು.
ಡಿಕೆಶಿ ಮೌನ, ನಾಯಕರಿಗೆ ಸಚಿವ ಸ್ಥಾನದ್ದೇ ಚಿಂತೆ!
”ಪ್ರಸ್ತುತ ಹೊಸ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರಂತೂ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಮಾತನಾಡುತ್ತಲೇ ಇಲ್ಲ. ಇನ್ನು ಕಾಂಗ್ರೆಸ್‌ನಲ್ಲಿರುವ ಹಿಂದುಳಿದ ವರ್ಗಗಳ ನಾಯಕರಿಗೆ ಸಮಾಜದ ಹಿತಚಿಂತನೆಗಿಂತ ತಮಗೆ ಸಿಗುವ ಮಂತ್ರಿ ಸ್ಥಾನ ಹಾಗೂ ಖಾತೆಗಳದ್ದೇ ದೊಡ್ಡ ಚಿಂತೆಯಾಗಿದೆ” ಎಂದು ಅವರು ಲೇವಡಿ ಮಾಡಿದರು.
ಈ ವೇಳೆ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ,ಉಪ ಮೇಯರ ಹಣಮಂತ ಕೊಂಗಾಲಿ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಅನಿಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ ಪ್ರಮುಖರು ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.



