ಶಾಸಕ ಬಾಲಚಂದ್ರ ಜಾರಕಿಹೊಳಿ ಕ್ಷೇತ್ರಕ್ಕೆ 860 ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ

ಹೊಸ ದಿಗಂತ ವರದಿ, ಗೋಕಾಕ :

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿನಿಧಿಸುವ ಅರಭಾವಿ ವಿಧಾನ ಸಭಾ ಮತಕ್ಷೇತ್ರಕ್ಕೆ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ಒಟ್ಟು 860 ಕೋಟಿ ರೂ. ಗಳ ಮೊತ್ತದ ಎರಡು ಕಾಮಗಾರಿಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಂಪುಟ ಸಭೆಯಲ್ಲಿ ಮೆಳವಂಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ 475 ಕೋಟಿ ರೂಗಳು ಮತ್ತು ಘಟಪ್ರಭಾ ನದಿಯಿಂದ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ 385 ಕೋಟಿ ರೂಗಳ ಪ್ರಸ್ತಾವಣೆಗೆ ಸಚಿವ ಸಂಪುಟ ಒಪ್ಪಿಗೆಯನ್ನು ಸೂಚಿಸಿದ್ದು, ಇದರಿಂದ ಅರಭಾಂವಿ ಕ್ಷೇತ್ರಕ್ಕೆ 860 ಕೋಟಿ ರೂಗಳ ಕಾಮಗಾರಿಗೆ ಸಚಿವ ಸಂಪುಟ ಅಸ್ತು ನೀಡಿದೆ.
ಅರಭಾವಿ ಕ್ಷೇತ್ರದ ಮೆಳವಂಕಿ ಹಾಗೂ ಇತರೆ 118 ಗ್ರಾಮಗಳಿಗೆ ಜಲಜೀವನ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಅನುಷ್ಠಾನಗೊಳ್ಳಲಿದೆ. ಈ ಯೋಜನೆಯಿಂದ ಕ್ಷೇತ್ರದ ಹಲವಾರು ಹಳ್ಳಿಗಳಿಗೆ ಕುಡಿಯುವ ನೀರಿನ ಬವಣೆ ನೀಗಿದಂತಾಗಿದೆ. ಗೋಕಾಕ ತಾಲೂಕಿನ 86 ಮತ್ತು ಮೂಡಲಗಿ ತಾಲೂಕಿನ 32 ಗ್ರಾಮಗಳ ಜನವಸತಿಗಳಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಿದಂತಾಗಿದೆ.
ಅರಭಾವಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 20 ಕೆರೆಗಳನ್ನು ಘಟಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆಗೆ 385 ಕೋಟಿ ರೂಗಳ ಕಾಮಗಾರಿ ನಡೆಯಲಿದ್ದು, ಸುಣಧೋಳಿ ಗ್ರಾಮದ ಹತ್ತಿರ ಪಂಪಹೌಸ್‍ನ್ನು ನಿರ್ಮಿಸಿ ಘಟಪ್ರಭಾ ನದಿಯಿಂದ 47.60 ಎಮ್‍ಸಿಎಫ್‍ಟಿ ನೀರನ್ನೆತ್ತಿ ಲಕ್ಷ್ಮೇಶ್ವರ, ತಪಸಿ, ಗೋಸಬಾಳ, ಬಿಲಕುಂದಿ, ಮನ್ನಿಕೇರಿ, ಕಳ್ಳಿಗುದ್ದಿ, ಹೊನಕುಪ್ಪಿ, ಕುಲಗೋಡ, ಢವಳೇಶ್ವರ, ವೆಂಕಟಾಪೂರ, ಹೊಸಯರಗುದ್ರಿ, ರಡ್ಡೇರಟ್ಟಿ ಮತ್ತು ಕೌಜಲಗಿ ಗ್ರಾಮಗಳಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಂಕ್ಷೆಯನ್ನು ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!