ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಜನರನ್ನು ಸಂಪರ್ಕಿಸಲು, ಅವರ ಗಮನ ಸೆಳೆಯಲು ಬಿಜೆಪಿ ಒಂದು ತಿಂಗಳು ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದೆ.
2014ರ ಮೇ 26ರಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗಿದ್ದು, ಪ್ರಸಕ್ತ ವರ್ಷದ ಮೇ 26ರಂದು ಸರ್ಕಾರಕ್ಕೆ 9 ವರ್ಷ ತುಂಬಲಿದೆ. ಹಾಗಾಗಿ, ಬಿಜೆಪಿಯು ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಿದೆ .
ಮೇ 30ರಿಂದ ಜೂನ್ 30ರ ಅವಧಿಯಲ್ಲಿ ಒಂದು ತಿಂಗಳು ಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮೇ 30ರಂದು ನರೇಂದ್ರ ಮೋದಿ ಅವರು ಬೃಹತ್ ರ‍್ಯಾಲಿ ಮೂಲಕ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅದೇ ರೀತಿ ದೇಶಾದ್ಯಂತ ಬಿಜೆಪಿಯ ಪ್ರಮುಖ ನಾಯಕರು 51 ರ‍್ಯಾಲಿಗಳನ್ನು ನಡೆಸಲಿದ್ದಾರೆ. ಜೊತೆಗೆ ದೇಶದ 396 ಲೋಕಸಭೆ ಕ್ಷೇತ್ರಗಳಲ್ಲಿ ಕೇಂದ್ರದ ಒಬ್ಬ ಸಚಿವರು ಅಥವಾ ರಾಷ್ಟ್ರೀಯ ನಾಯಕರು ಸಾರ್ವಜನಿಕ ಸಭೆ ನಡೆಸಲಿದ್ದಾರೆ.
ಬಳಿಕ ಮತಗಳ ಬೇಟೆಗೂ ಯೋಜನೆ ರೂಪಿಸಿದೆ. ಪ್ರಸಕ್ತ ವರ್ಷಾಂತ್ಯದಲ್ಲಿ ಚುನಾವಣೆ ನಡೆಯುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರ‍್ಯಾಲಿಗಳನ್ನು ಆಯೋಜಿಸಲು ಚಿಂತನೆ ನಡೆದಿದೆ. ಸಾರ್ವಜನಿಕ ಸಭೆ, ಸಮಾವೇಶಗಳ ಮೂಲಕ ಕೇಂದ್ರ ಸರ್ಕಾರದ ಸಾಧನೆ, ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡುವುದು ಪ್ರಮುಖ ಉದ್ದೇಶವಾಗಿದೆ.
ಬಿಜೆಪಿ ಮುಖ್ಯಮಂತ್ರಿಗಳು, ಆಯಾ ರಾಜ್ಯಗಳಲ್ಲಿರುವ ಪ್ರತಿಪಕ್ಷಗಳ ನಾಯಕರು, ಬಿಜೆಪಿ ಸಂಸದರು, ಸಚಿವರು ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಪ್ರತಿ ಲೋಕಸಭೆ ಕ್ಷೇತ್ರಗಳಲ್ಲಿ 250 ಕುಟುಂಬಗಳಂತೆ ದೇಶಾದ್ಯಂತ 2.5 ಲಕ್ಷ ಕುಟುಂಬಗಳನ್ನು ಸಂಪರ್ಕಿಸವುದು ಕೂಡ ಕಾರ್ಯಕ್ರಮದ ಭಾಗವಾಗಿದೆ. ಪ್ರಮುಖವಾಗಿ, ಕಲಾವಿದರು, ಕ್ರೀಡಾಪಟುಗಳು, ಉದ್ಯಮಿಗಳು ಸೇರಿ ಬೇರೆಯವರ ಮೇಲೆ ಪ್ರಭಾವ ಬೀರುವ ಕುಟುಂಬಸ್ಥರನ್ನು ಬಿಜೆಪಿ ನಾಯಕರು ಸಂಪರ್ಕಿಸಲಿದ್ದಾರೆ ಎಂದು ತಿಳಿದುಬಂದಿದೆ.