ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಇದರ ಬೆನ್ನಲ್ಲೇ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಹೊಸದಾಗಿ ಆಯ್ಕೆಯಾಗಿರುವ 230 ಶಾಸಕರ ಪೈಕಿ 90 ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಅದು ಬಹಿರಂಗಪಡಿಸಿದೆ.
ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವವರ ಪೈಕಿ 34 ಮಂದಿ ಜನಪ್ರತಿನಿಧಿಗಳು ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ವರದಿ ಪ್ರಕಾರ, 2018ರಲ್ಲಿ 94 ಶಾಸಕರು (ಶೇ 41) ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರು. ಈ ಪ್ರಮಾಣದಲ್ಲೀಗ ಕೊಂಚ ಇಳಿಕೆಯಾಗಿದೆ.
ಮಧ್ಯಪ್ರದೇಶದ 230 ವಿಧಾನಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ನವೆಂಬರ್ 17 ರಂದು ಮತದಾನ ನಡೆದಿದ್ದು, ಭಾನುವಾರ ಮತ ಎಣಿಕೆ ನಡೆಸಲಾಯಿತು. ರಾಜ್ಯದಲ್ಲಿ ಬಿಜೆಪಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಸಮಗ್ರ ವಿಜಯವನ್ನು ದಾಖಲಿಸಿದರೆ, ಕಾಂಗ್ರೆಸ್ ಪಕ್ಷವು 66 ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ ಮತ್ತು ರಾಜ್ಯದಲ್ಲಿ ಭಾರತ್ ಆದಿವಾಸಿ ಪಕ್ಷವು ಒಂದು ಸ್ಥಾನವನ್ನು ಗೆದ್ದಿದೆ.