ಯುಎಇಯ ಮೊದಲ ಚಂದ್ರಯಾನದ ಶೇ.90 ಪರಿಕರಗಳು ಮೇಡ್ ಇನ್ ಇಂಡಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ತನ್ನ ಮಹತ್ವಪೂರ್ಣ ಸಂಶೋಧನೆಗಳ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಅದೆಷ್ಟೋ ದೇಶಗಳು ಭಾರತದ ಸಹಾಯದಿಂದ ಉಪಗ್ರಹ ಉಡಾಯಿಸಿವೆ. ಇದೀಗ ಯುಎಇ ದೇಶವು ತನ್ನ ಮೊದಲ ಚಂದ್ರಯಾಣಕ್ಕೆ ಸಿದ್ಧವಾಗಿದ್ದು ತನ್ನ ಬಾಹ್ಯಾಕಾಶ ಯಾನದಲ್ಲಿ ಭಾರತದಲ್ಲಿ ಉತ್ಪಾದನೆಯಾದ ಪರಿಕರಗಳನ್ನು ಪ್ರಮುಖವಾಗಿ ಅದು ಬಳಸಿಕೊಳ್ಳುತ್ತಿದೆ ಎಂಬುದು ಗಮನಾರ್ಹ. ಯುಎಇ ಯ ಚಂದ್ರಯಾನದ ಮುಖ್ಯ ಭಾಗವಾಗಿರುವ ರಶೀದ್‌ ರೋವರ್‌ ಬಹುಪಾಲು ನಿರ್ಮಾಣವಾಗಿದ್ದು ಚೆನ್ನೈನಲ್ಲಿ ಎಂಬಂಶವನ್ನು ಮನೀಕಂಟ್ರೋಲ್‌ ವರದಿ ಮಾಡಿದೆ.

ಚೆನ್ನೈ ಮೂಲದ ಎಸ್‌ಟಿ ಅಡ್ವಾನ್ಸ್ಡ್‌ ಕಂಪೋಸೈಟ್ಸ್‌ ಎಂಬ ನವೋದ್ದಿಮೆ ಈ ರಶೀದ್‌ ರೋವರ್‌ ಗೆ 90 ಶೇಕಡಾದಷ್ಟು ಪರಿಕರಗಳನ್ನು ಪೂರೈಸಿದೆ. ಈ ರೋವರ್‌ ರಚನೆ, ಚಕ್ರಗಳು, ಸೌರ ಫಲಕಗಳು, ಕ್ಯಾಮೆರಾ ಹೋಲ್ಡರ್ ಸೇರಿದಂತೆ ಸುಮಾರು 40 ಉಪಕರಣಗಳು ಭಾರತದಲ್ಲಿ ಉತ್ಪಾದನೆಯಾಗಿವೆ. ರೋವರ್‌ನಲ್ಲಿ ಸಂವೇದಕಗಳನ್ನು ಅಳವಡಿಸಲಾಗಿದ್ದು, ಇದು ಚಂದ್ರನ ಮೇಲೆ ಇಳಿದ ನಂತರ ಮಣ್ಣಿನಲ್ಲಿ ತೇವಾಂಶವನ್ನು ಹೊಂದಿದೆಯೇ ಎಂದು ಪರೀಕ್ಷಿಸಲು ಮತ್ತು ಇತರ ಹಲವು ಕಾರ್ಯಾಚರಣೆಗಳನ್ನು ಕೈಗೊಳ್ಳಲಿದೆ. ಯುಎಇ ಯ ಚಂದ್ರಯಾನದಲ್ಲಿ ಪ್ರಮುಖವಾಗಿ ಬಳಸಲ್ಪಡುವ ಈ ರೋವರ್‌ ನ ಬಹುಪಾಲು ಉಪಕರಣಗಳನ್ನು ಚೆನ್ನೈನ ಎಸ್‌ಟಿ ಅಡ್ವಾನ್ಸ್ಡ್‌ ಕಂಪೋಸೈಟ್ಸ್‌ ಪೂರೈಸಿದೆ.

ಇತ್ತೀಚೆಗಷ್ಟೇ ವಿಕ್ರಂ ಉಪಗ್ರಹ ಉಡಾವಣೆಯ ಮೂಲಕ ಭಾರತದ ಬಾಹ್ಯಾಕಾಶ ಯಾನವು ಖಾಸಗಿ ಕ್ಷೇತ್ರಗಳಿಗೂ ವಿಸ್ತರಿಸುತ್ತಿರೋ ಹೊತ್ತಲ್ಲಿ ಈ ಬೆಳವಣಿಗೆ ಆಶಾದಾಯಕವಾಗಿದೆ. ಮೇಕ್‌ ಇನ್‌ ಇಂಡಿಯಾದ ಮೂಲಕ ಭಾರತ ಜಗತ್ತಿಗೆ ದೊಡ್ಡ ಪೂರೈಕೆದಾರನಾಗುವತ್ತ ದಾಪುಗಾಲಿಡುತ್ತಿದೆ ಎಂಬುದನ್ನು ಇದು ಸೂಚಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!