99 ವರ್ಷದ ಲೀಸ್ ನಿಯಮ 10 ವರ್ಷಕ್ಕೆ ಬದಲಾವಣೆ: ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಕರ್ನಾಟಕದಲ್ಲಿ ಹೊಸ ಅವಕಾಶ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಮೂಲಕ ಕೈಗಾರಿಕಾ ಉದ್ದೇಶಗಳಿಗೆ ಹಂಚಿಕೆಯಾದ 2 ಎಕರೆಗೂ ಹೆಚ್ಚಿನ ಭೂಮಿಯನ್ನು 10 ವರ್ಷಗಳ ಅವಧಿಯ ಭೋಗ್ಯ ಮತ್ತು ಮಾರಾಟ (ಲೀಸ್ ಕಂ ಸೇಲ್) ಕ್ಕೆ ನೀಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ಧರಿಸಿದೆ.

ಈವರೆಗೆ ಕೇವಲ 99 ವರ್ಷಗಳ ಲೀಸ್ ಗೆ ಮಾತ್ರ ಅನುಕೂಲವಿತ್ತು.

ಈ ಮೂಲಕ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್. ನಿರಾಣಿ ಬಂಪರ್ ಕೊಡುಗೆ ನೀಡಿದ್ದಾರೆ.

ಸಚಿವ ಮುರುಗೇಶ್ ನಿರಾಣಿಯವರು 2022ರಲ್ಲಿ ’10 ವರ್ಷಗಳ ಲೀಸ್ ಕಮ್ ಸೇಲ್‌ ಡೀಡ್‌’ ನೂತನ ನಿಯಮವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವ ಸಂಕಲ್ಪ ತೊಟ್ಟಿದ್ದಾರೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಉದ್ದೇಶಿತ ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಾಗಿದೆ. ಇನ್ನು ಮುಂದೆ 10 ವರ್ಷಗಳ ಅವಧಿಗೆ ಕೈಗಾರಿಕಾ ಉದ್ದೇಶಗಳಿಗೆ ನೀಡಲಾದ ಜಮೀನನ್ನು ಲೀಸ್ ಕಂ ಸೇಲ್‍ಗೆ ನೀಡಲು ಸಮ್ಮತಿಸಲಾಗಿದೆ.

ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಬಂಡವಾಳ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಸುಲಲಿತ ವಹಿವಾಟು ನಡೆಸಲು ಅನುಕೂಲವಾಗುವಂತೆ ಶೀಘ್ರದಲ್ಲೇ ಹೊಸ ನೀತಿ ನಿಯಮಗಳನ್ನು ರೂಪಿಸಲಾಗುವುದು. ಒಂದೆರಡು ವಾರಗಳಲ್ಲಿ ಪೂರ್ಣ ಪ್ರಮಾಣದ ಸರಕಾರಿ ಆದೇಶವನ್ನು ಹೊರಡಿಸುವ ನಿರೀಕ್ಷೆಯಿದೆ ಎಂದು ನಿರಾಣಿ ವಿವರಿಸಿದ್ದಾರೆ.

ಈಗಿನ ನಿಯಮಗಳೇನಿವೆ?

ಕೆಐಎಡಿಬಿಯಿಂದ ಕೇವಲ 99 ವರ್ಷಗಳ ಲೀಸ್ ಆಧಾರದ ಮೇಲೆ 2 ಎಕರೆಗಿಂತ ಹೆಚ್ಚಿನ ಭೂಮಿಯನ್ನು ಮಂಜೂರು ಮಾಡುವುದರಿಂದ ಹಲವಾರು ಪ್ರಮುಖ ಖಾಸಗಿ ಕಂಪನಿಗಳು ಕೈಗಾರಿಕೆಗಳನ್ನು ಸ್ಥಾಪಿಸಲು ಹಿಂಜರಿಯುತ್ತಿದ್ದವು. ಮಂಜೂರು ಮಾಡಿದ ಭೂಮಿಯನ್ನು ಮಾರಾಟ ಮಾಡಲು ಎಂದಿಗೂ ಅವಕಾಶವಿರಲಿಲ್ಲ. ಈ ಹಿಂದಿನ  ಷರತ್ತಿನ ಪ್ರಕಾರ, ಕೈಗಾರಿಕೆಗಳಿಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಮತ್ತು ಬಂಡವಾಳದ ಒಳಹರಿವು ಪಡೆಯಲು ಹಾಗೂ ಗುತ್ತಿಗೆ ಪಡೆದ ಭೂಮಿಯನ್ನು ಅಡಮಾನಗೊಳಿಸಲು ತೊಂದರೆಗಳು ಎದುರಾಗಿತ್ತು. ಇದರ ಪರಿಣಾಮ ರಾಜ್ಯದಲ್ಲಿ  ಹೂಡಿಕೆಯ ಹರಿವಿಗೆ ಅಡ್ಡಿಯಾಗಿದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಪ್ರಸ್ತಾವಿತ ತಿದ್ದುಪಡಿ ಏನು ಮಾಡಲಿದೆ?

ಪ್ರಸ್ತಾವಿತ ತಿದ್ದುಪಡಿಯ ಮೂಲಕ, ಯಾವುದೇ ಕೈಗಾರಿಕಾ ಘಟಕವು ಭೂ ಹಂಚಿಕೆಯ ನಂತರ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೆ, ಅವರು ಹತ್ತು ವರ್ಷಗಳವರೆಗೆ ಕಾಯದೆ ಕೆಐಎಡಿಬಿಯಿಂದ ಮಾರಾಟ ಪತ್ರದ ಶೀರ್ಷಿಕೆಯನ್ನು ಪಡೆಯಲು ಅರ್ಹತೆ ಪಡೆಯುತ್ತಾರೆ. ಇಲಾಖೆಯು ತನ್ನ ಅಧಿಕಾರಿಗಳ ಮೂಲಕ ಉದ್ಯಮದ 24 ತಿಂಗಳ ಬ್ಯಾಲೆನ್ಸ್‌ ಶೀಟ್‌ ಪರಿಶೀಲಿಸಿ ಎಲ್ಲವೂ ನಿಯಮಬದ್ಧವಾಗಿದ್ದರೆ, ಸೇಲ್‌ ಡೀಡ್‌ ಕೊಡಲಾಗುತ್ತದೆ. ಇದರಿಂದ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅನುಕೂಲವಾಗುತ್ತದೆ. ಕೆಐಎಡಿಬಿ ನಿಯಮಗಳ ಪ್ರಕಾರ, ಎಂಎಸ್ಎಂಇ ವಲಯಗಳು ಭೂಮಿಯನ್ನು ಹಂಚಿಕೆ ಮಾಡಿದ ದಿನಾಂಕದಿಂದ ಮೂರು ವರ್ಷಗಳೊಳಗೆ ಉದ್ಯಮವನ್ನು ಸ್ಥಾಪಿಸಿ, ಉತ್ಪಾದನೆಯನ್ನು ಪ್ರಾರಂಭಿಸಬೇಕು. ಬೃಹತ್  ಮತ್ತು ಮಧ್ಯಮ ಕೈಗಾರಿಕೆಗಳಿಗೆ ಐದು ವರ್ಷಗಳ ಸಮಯವನ್ನು ‌ನೀಡಲಾಗಿದೆ.

ತಿದ್ದುಪಡಿಯು ಉದ್ಯಮದ ವಿಸ್ತರಣೆ ಮತ್ತು ಇನ್ನೂ ಹೆಚ್ಚಿನ ಹೂಡಿಕೆಗೆ ಪ್ರೋತ್ಸಾಹಿಸುತ್ತದೆ. ಏಕೆಂದರೆ ಉದ್ಯಮಿಗಳು ಕಂಪನಿಯನ್ನು ಯಶಸ್ವಿಯಾಗಿ ನಡೆಸಿದ ನಂತರ ಮಂಜೂರು ಮಾಡಿದ ಭೂಮಿ ಅವರ ಮಾಲೀಕತ್ವದಲ್ಲಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!