October 13, 2026
Tuesday, October 13, 2026
spot_img

ಎಸ್‌ಸಿ-ಎಸ್‌ಟಿ ಮೀಸಲಾತಿ ರಕ್ಷಣೆಗೆ ಒತ್ತಾಯ: ಸರ್ಕಾರದ ವಿರುದ್ಧ ಸಂಸದ ಗೋವಿಂದ ಕಾರಜೋಳ ಆಕ್ರೋಶ

ಹೊಸದಿಗಂತ ವರದಿ ಚಿತ್ರದುರ್ಗ:

ರಾಜ್ಯದಲ್ಲಿ ಎಸ್.ಸಿ. ಮತ್ತು ಎಸ್.ಟಿ. ಮೀಸಲಾತಿ ಹೆಚ್ಚಳ ಹಾಗೂ ಸಂವಿಧಾನಿಕ ಹಕ್ಕುಗಳ ರಕ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂಡಲೇ ರಾಜೀನಾಮೆ ನೀಡಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

ಚಿತ್ರದುರ್ಗ ನಗರದ ಅವರ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅಂದಿನ ನಾಯಕರು ಎಸ್‌ಸಿ ಮತ್ತು ಎಸ್‌ಟಿ ಜನಾಂಗವನ್ನು ಮೇಲೆತ್ತಲು ಮೀಸಲಾತಿ ಸೌಲಭ್ಯ ತಂದಿದ್ದರು. ಅಂದು ಎಸ್‌ಸಿಯಲ್ಲಿ ಕೇವಲ 6 ಜಾತಿಗಳು ಮತ್ತು ಎಸ್‌ಟಿಯಲ್ಲಿ6 ಜಾತಿಗಳು ಮಾತ್ರ ಇದ್ದವು. ಕಾಲಕ್ರಮೇಣ ಜನಸಂಖ್ಯೆಗೆ ಅನುಗುಣವಾಗಿ ಜಾತಿಗಳು ಮತ್ತು ಮೀಸಲಾತಿ ಹೆಚ್ಚಿಸಬೇಕಿತ್ತು. ಆದರೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡಲಿಲ್ಲ ಎಂದರು.

2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗ ನೇಮಿಸಲಾಯಿತು. ಈ ಆಯೋಗವು ಸಂವಿಧಾನದ ಆಶಯಕ್ಕೆ ಅನುಗುಣವಾಗಿ 2022ರಲ್ಲಿ ಮೀಸಲಾತಿಯನ್ನು ಎಸ್‌ಸಿಗೆ15ರಿಂದ 17 ಹಾಗೂ ಎಸ್‌ಟಿಗೆ 3ರಿಂದ 7 ಹೆಚ್ಚಿಸಲು ವರದಿ ನೀಡಿತ್ತು. ಬಸವರಾಜ ಬೊಮ್ಮಾಯಿ ಸರ್ಕಾರ ಈ ವರದಿಯನ್ನು ಒಪ್ಪಿಕೊಂಡು ಎರಡು ಸದನಗಳಲ್ಲಿ ಬಿಲ್ ಮಂಡಿಸಿ, ರಾಜ್ಯಪಾಲರ ಅನುಮತಿ ಪಡೆದು ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಆದರೆ ಈಗ ಮೀಸಲಾತಿ ಪ್ರಮಾಣ ರದ್ದತಿ ಆದೇಶದಿಂದಾಗಿ ಎಸ್‌ಸಿ-ಎಸ್‌ಟಿ ಜನಾಂಗದ ತಲೆ ಮೇಲೆ ದೊಡ್ಡ ಕಲ್ಲು ಬಿದ್ದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಎಸ್‌ಸಿ-ಎಸ್‌ಟಿ ಮೀಸಲಾತಿ ರದ್ದಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ದಲಿತರಿಗೆ ದ್ರೋಹ ಎಸಗಿದೆ. ಸರ್ಕಾರ ತಕ್ಷಣವೇ ಸೂಕ್ತ ಕಾನೂನು ಹೋರಾಟ ನಡೆಸಬೇಕು. ಇಲ್ಲವೇ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ತಪ್ಪಿದಲ್ಲಿ ಸಮಾಜದ ವತಿಯಿಂದ ಹಾಗೂ ಎಲ್ಲಾ ಶಾಸಕರು, ಮಂತ್ರಿಗಳು, ಮುಖಂಡರ ಸಹಯೋಗದೊಂದಿಗೆ ಪಕ್ಷಾತೀತವಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆದಾಗ ರಾಜ್ಯ ಸರ್ಕಾರವು ಸಮರ್ಪಕವಾಗಿ ವಾದ ಮಂಡಿಸಿಲ್ಲ. ಕೋರ್ಟ್‌ಗೆ ನಾಲ್ಕು ಬಾರಿ ಮುದತ್ ಬಂದಾಗಲೂ ಕೂಡ ರಾಜ್ಯ ಸರ್ಕಾರ ಅಥವಾ ವಕೀಲರು ಹಾಗೂ ಅಧಿಕಾರಿಗಳು ಹಾಜರಾಗಿಲ್ಲ. ಐದನೇ ಬಾರಿ ಮುದತ್ ಎದ್ದಾಗ ಅಡ್ವೊಕೇಟ್ ಜನರಲ್ ಅವರು ಶೇ. 17 ಎಸ್‌ಸಿಗೆ ಮತ್ತು ಶೇ. 7ಎಸ್‌ಟಿಗೆ ಮಾಡಿದ್ದನ್ನು ನಾವು ಅನುಷ್ಠಾನ ಮಾಡುವುದಿಲ್ಲ ಎಂದು ಸ್ವತಃ ಕೋರ್ಟ್‌ಗೆ ತಿಳಿಸಿದ್ದಾರೆ.  ದತ್ತಾಂಶದ ಕೊರತೆಯಿದೆ ಎಂಬ ಕಾರಣ ನೀಡಿ ಹೈಕೋರ್ಟ್ ಈ ಮೀಸಲಾತಿಯನ್ನು ರದ್ದುಪಡಿಸಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ವಿಭಾಗ ಸಹ ಪ್ರಬಾರಿ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗಿರೀಶ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಎಸ್.ಸಿ. ಮೋರ್ಚಾ ಅಧ್ಯಕ್ಷ ಪರಶುರಾಮ್ ಮತ್ತಿತರರು ಹಾಜರಿದ್ದರು.

Must Read