ಹೊಸದಿಗಂತ ವರದಿ ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ನಾಯಕ ಸಮಿತಿ ವತಿಯಿಂದ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಾಡದೊರೆ ರಾಜವೀರ ಮದಕರಿ ನಾಯಕ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಟ ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಟ ಸುದೀಪ್ ಕಾರ್ಯಕ್ರಮಕ್ಕೆ ಆಗಮಿಸುವ ಸುದ್ದಿ ತಿಳಿದಿದ್ದ ಜನರು ನಗರದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದರು. ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಜನರಿಂದ ಇಡೀ ಚಿತ್ರದುರ್ಗ ನಗರವೇ ಜನಜಂಗುಳಿಯಿಂದ ತುಂಬಿ ಹೋಗಿತ್ತು. ನಗರದ ಪ್ರಮುಖ ಬೀದಿಗಳು ಸೇರಿದಂತೆ ಎಲ್ಲೆಡೆ ಜನವೋ ಜನ. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವಕರು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಕಾತರಾಗಿದ್ದರು.

ನೂರಾರು ಸಂಖ್ಯೆಯ ಯುವಕರು ಕಾರ್ಯಕ್ರಮದಲ್ಲಿ ಜಮಾಯಿಸಿದ್ದರು. ಸುದೀಪ್ ಅವರ ಭಾವಚಿತ್ರ ಇರುವ ಬೃಹತ್ ಗಾತ್ರದ ಭಾವುಟಗಳನ್ನು ಹಿಡಿದು ಕಾರ್ಯಕ್ರಮದಲ್ಲಿ ಅತ್ತಿಂದಿತ್ತ, ಇತ್ತಿಂದಿತ್ತ ಬೀಸುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿದ್ದರು. ಅಭಿಮಾನಿಗಳ ಸಿಳ್ಳೆ, ಕೇಕೆ, ಹರ್ಷೋದ್ಘಾರದ ಧ್ವನಿಗೆ ಇಡೀ ಮೈದಾನವೇ ಮಾರ್ಧನಿಸಿತು. ಪೊಲೀಸರ ಸರ್ಪಗಾವಲನ್ನು ಲೆಕ್ಕಿಸದೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುನ್ನುಗ್ಗುತ್ತಿದ್ದರು.
ನಟ ಸುದೀಪ್ ವೇದಿಕೆಗೆ ಬರುವುದನ್ನೇ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳ ದಂಡು ಒಂದು ಹಂತದಲ್ಲಿ ಅತಿಥಿಗಳ ಭಾಷಣವನ್ನು ಅಷ್ಟಾಗಿ ಕೇಳಿಸಿಕೊಳ್ಳಲಿಲ್ಲ. ತಮ್ಮ ನೆಚ್ಚಿನ ನಟ ವೇದಿಕೆ ಆಗಮಿಸುತ್ತಿದ್ದಂತೆ ತಮ್ಮನ್ನು ತಡೆಹಿಡಿದಿದ್ದ ಪೊಲೀಸ್ ಸಿಬ್ಬಂದಿಯನ್ನು ಪಕ್ಕಕ್ಕೆ ಸರಿಸಿ ಪ್ರವಾಹದಂತೆ ವೇದಿಕೆ ಮುಂದಿನ ಜಾಗಕ್ಕೆ ನುಗ್ಗಿ ಜಮಾಯಿಸಿದರು. ಕಿಚ್ಚ, ಕಿಚ್ಚ, ಕಿಚ್ಚ ಎಂದು ಕೇಳುಗರ ಕಿವಿ ಗಡಚಿಕ್ಕುವಂತೆ ಜಯಘೋಷ ಮೊಳಗಿಸಿದರು.
ಇದನ್ನೂ ಓದಿ:
ಅಭಿಮಾನಿಗಳನ್ನು ಕುರಿತು ನಟ ಸುದೀಪ್ ಮಾತನಾಡಿ, ನಿಮ್ಮ ಅಭಿಮಾನಕ್ಕೆ ನಾನು ಸದಾ ಋಣಿ. ಚಿತ್ರರಂಗದಲ್ಲಿ ಕಳೆದ ಹಲವು ದಶಕಗಳಿಂದ ನನ್ನನ್ನು ಬೆಂಬಲಿಸಿಕೊಂಡ ಬಂದ ನಿಮಗೆ ಧನ್ಯವಾದಗಳು. ಕಳೆದ ಬಾರಿಯ ಜಯಂತಿ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿರಲಿಲ್ಲ. ಈ ಬಾರಿ ಆಹ್ವಾನದ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ನಿಮ್ಮ ಅಭಿಮಾನದ ಮಹಾಪೂರ ಕಂಡು ಮನ ತುಂಬಿ ಬಂದಿದೆ. ನಿಮ್ಮ ಪ್ರೀತಿ, ಅಭಿಮಾನ ನನ್ನ ಮೇಲೆ ಸದಾ ಹೀಗೆ ಎರಲಿ ಎಂದರು.
ವೇದಿಕೆಯಲ್ಲಿ ವಿವಿಧ ಮಠಾಧೀಶರು, ರಾಜಕೀಯ ನಾಯಕರು, ಚಿತ್ರದುರ್ಗ ಜಿಲ್ಲಾ ನಾಯಕ ಸಮಿತಿ ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಜರಿದ್ದರು.



