October 13, 2026
Tuesday, October 13, 2026
spot_img

ಬುದ್ಧಿವಾದ ಹೇಳಿದ್ದೇ ತಪ್ಪಾಯ್ತಾ?: ಪ್ರಿಯಕರನ ಜೊತೆ ಸೇರಿ ಅಜ್ಜಿಯನ್ನೇ ಕೊಂ*ದ ಮೊಮ್ಮಗಳು

 ಹೊಸದಿಗಂತ ವರದಿ ಕೆ.ಆರ್.ಪೇಟೆ:

ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಅಜ್ಜಿ-ಮೊಮ್ಮಗಳ ಸಂಬಂಧಕ್ಕೆ ಕಳಂಕ ತರುವ, ಮನಕಲಕುವ ಘಟನೆಯೊಂದು ನಡೆದಿದೆ. ಪ್ರೀತಿಯ ವಿಚಾರಕ್ಕೆ ಬುದ್ಧಿವಾದ ಹೇಳಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಅಜ್ಜಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ 16 ವರ್ಷದ ಮೊಮ್ಮಗಳು ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ:

ಬೂಕನಕೆರೆ ಗ್ರಾಮದ ನಿವಾಸಿ ಮಹದೇವಮ್ಮ (52) ಕೊಲೆಯಾದ ದುರ್ದೈವಿ. ಇವರ ಮೊಮ್ಮಗಳು ಮತ್ತು ಆಕೆಯ ಪ್ರಿಯಕರ ಆಕಾಶ್ ಕೊಲೆ ಆರೋಪಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಅಪ್ರಾಪ್ತೆ ಕೀರ್ತನಾ, ಆಕಾಶ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದ ಅಜ್ಜಿ ಮಹದೇವಮ್ಮ, “ಹುಡುಗ ಸರಿ ಇಲ್ಲ, ಈ ಪ್ರೀತಿ-ಪ್ರೇಮ ಬೇಡ” ಎಂದು ಮೊಮ್ಮಗಳಿಗೆ ಬುದ್ಧಿವಾದ ಹೇಳಿದ್ದರು. ಇದರಿಂದ ಕುಪಿತಗೊಂಡ ಕೀರ್ತನಾ, ತನ್ನ ಪ್ರಿಯಕರನ ಜೊತೆ ಸೇರಿ ಅಜ್ಜಿಯನ್ನು ಮುಗಿಸಲು ಸ್ಕೆಚ್ ಹಾಕಿದ್ದಾಳೆ ಎನ್ನಲಾಗಿದೆ.

ಆರೋಪಿಗಳಿಬ್ಬರೂ ಸೇರಿ ಅಜ್ಜಿ ಮಹದೇವಮ್ಮ ಅವರನ್ನು ಪ್ರಿಯಕರನ ಮನೆಗೆ ಕರೆಸಿಕೊಂಡು, ಅಲ್ಲಿಯೇ ಮಹದೇವಮ್ಮ ಅವರ ಮೇಲೆ ದಿಂಬಿನಿಂದ ಉಸಿರುಗಟ್ಟಿಸಿ, ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹದೇವಮ್ಮ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಮಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ:

ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತರ ಅಕ್ಕನ ಮಗ ರವಿಕುಮಾರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ಕೀರ್ತನಾಳನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸಿ ಶಿವಮೊಗ್ಗದ ಬಾಲಮಂದಿರಕ್ಕೆ ರವಾನಿಸಲಾಗಿದೆ. ಆರೋಪಿ ಆಕಾಶ್ ತಲೆಮರೆಸಿಕೊಂಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್‌ಪಿ. ಡಾ.ವಿ.ಜೆ.ಶೋಭಾರಾಣಿ, ಡಿವೈಎಸ್‌ಪಿ ಚಲುವರಾಜು, ಸಿಪಿಐ ಮಹೇಶ್, ಎಸ್‌ಐ ಸಿದ್ದಲಿಂಗ ಬಾನಸಿ ಪರಿಶೀಲನೆ ನಡೆಸಿದ್ದು, ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ತಂಡ ರಚಿಸಿ ಮುಂದಿನ ಕ್ರಮಕ್ಕೆ ಸಜ್ಜಾಗಿದ್ದಾರೆ.

ಪ್ರೀತಿ ಕುರುಡು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಬುದ್ಧಿ ಹೇಳಿದ ಅಜ್ಜಿಯನ್ನೇ ಬಲಿ ತೆಗೆದುಕೊಂಡ ಈ ಪಾಗಲ್ ಪ್ರೇಮಿಗಳ ಕೃತ್ಯಕ್ಕೆ ಬೂಕನಕೆರೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Must Read