October 14, 2026
Wednesday, October 14, 2026
spot_img

ಸಿನಿಮಾ ಪಾತ್ರದಿಂದ ಸ್ಫೂರ್ತಿ: 400 ಕುಟುಂಬಗಳನ್ನು ದತ್ತು ಪಡೆದ ನಟಿ ರಶ್ಮಿಕಾ ಮಂದಣ್ಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ನಟನೆಯ ಮೂಲಕ ಮಾತ್ರವಲ್ಲದೆ, ಈಗ ತಮ್ಮ ವ್ಯಕ್ತಿತ್ವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಮುಂಬರುವ ‘ರಣಬಾಲಿ’ ಸಿನಿಮಾದ ಚಿತ್ರೀಕರಣದ ಅನುಭವದಿಂದ ಪ್ರಭಾವಿತರಾಗಿ, ಅವರು ಬಡ ಹಾಗೂ ನಿರ್ಗತಿಕ 400 ಕುಟುಂಬಗಳನ್ನು ದತ್ತು ಪಡೆದಿದ್ದಾರೆ. ಈ ಮೂಲಕ ಸಮಾಜದಲ್ಲಿ ಮತ್ತೊಮ್ಮೆ ತಮ್ಮ ಒಳ್ಳೆಯ ಗುಣವನ್ನು ಸಾಬೀತುಪಡಿಸಿದ್ದಾರೆ.

ಭಾರತೀಯ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾದ 1876-78ರ ಭೀಕರ ಬರಗಾಲದ ಹಿನ್ನೆಲೆಯಲ್ಲಿ ‘ರಣಬಾಲಿ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ‘ಜಯಮ್ಮ’ ಎಂಬ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರದ ಹಿನ್ನೆಲೆ ಮತ್ತು ರೈತರು ಹಾಗೂ ಬಡವರು ಅನುಭವಿಸಿದ ಕಷ್ಟಗಳು ನಟಿಯ ಮನಸ್ಸನ್ನು ತೀವ್ರವಾಗಿ ಕಾಡಿದೆ. ಸಿನಿಮಾದಲ್ಲಿನ ಪಾತ್ರಕ್ಕೂ, ತಮ್ಮ ನಿಜ ಜೀವನಕ್ಕೂ ಸಾಮ್ಯತೆಯಿದೆ ಎಂದು ಅವರು ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ದತ್ತು ಪಡೆದ ಈ 400 ಕುಟುಂಬಗಳಿಗೆ ರಶ್ಮಿಕಾ ಅವರ ತಂಡವು ಅಗತ್ಯವಿರುವ ದಿನಸಿ ಕಿಟ್‌ಗಳನ್ನು ಮನೆಗಳಿಗೆ ತಲುಪಿಸುತ್ತಿದೆ. ಮುಂದಿನ ಒಂದು ವರ್ಷದವರೆಗೆ ಹಂತ ಹಂತವಾಗಿ ಈ ಸಹಾಯ ಮುಂದುವರಿಯಲಿದೆ. ಪ್ರತೀ ಕುಟುಂಬಕ್ಕೆ ಮೂರು ತಿಂಗಳವರೆಗೆ ದಿನಸಿ ಖರ್ಚನ್ನು ತಪ್ಪಿಸಿ, ಆ ಹಣವನ್ನು ಉಳಿತಾಯ ಮಾಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈವರೆಗೆ ಈ ಸಮಾಜಮುಖಿ ಕೆಲಸಗಳನ್ನು ರಶ್ಮಿಕಾ ಗೌಪ್ಯವಾಗಿ ಇಟ್ಟುಕೊಂಡಿದ್ದರು. ಆದರೆ, ತಮ್ಮ ಅಭಿಮಾನಿಗಳಲ್ಲಿಯೂ ಸಮಾಜ ಸೇವೆ ಮಾಡುವ ಮನೋಭಾವ ಬೆಳೆಯಲಿ ಎಂಬ ಆಶಯದಿಂದ ಈಗ ಇದನ್ನು ಬಹಿರಂಗಪಡಿಸಿದ್ದಾರೆ. “ನನ್ನ ಜೀವನದ ಕಷ್ಟಗಳು, ನಿದ್ರೆ ಇಲ್ಲದ ರಾತ್ರಿಗಳು ಮತ್ತು ನೋವುಗಳೆಲ್ಲವೂ ಈ ಜನರ ಮುಖದ ಮೇಲಿನ ನಗುವನ್ನು ನೋಡಿದಾಗ ಸಾರ್ಥಕ ಎನಿಸುತ್ತವೆ” ಎಂದು ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ. ರಶ್ಮಿಕಾ ಅವರ ಈ ಸರಳತೆ ಮತ್ತು ಮಾನವೀಯತೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Must Read