October 14, 2026
Wednesday, October 14, 2026
spot_img

ಮೈಸೂರು ಅರಮನೆಯಿಂದ ರಾಮಾಯಣದವರೆಗೆ: ಜಾನಪದ ಲೋಕದಲ್ಲಿ ಕಣ್ಮನ ಸೆಳೆಯುವ ಗೊಂಬೆ ಹಬ್ಬ

ಹೊಸದಿಗಂತ ವರದಿ ರಾಮನಗರ :

ಮೈಸೂರು ಅರಮನೆ, ಕೀಲುಕುದುರೆ, ಹಾವಾಡಿಗ, ದಸರಾ ಗೊಂಬೆಗಳು, ಮದುವೆ, ವಧುವರ, ದಶಾವತಾರ, ವಾದ್ಯ, ರಾಮಾಯಣದ ವಿವಿಧ ದೃಶ್ಯಾವಳಿ, ಸಂಗೀತ ಕಛೇರಿ, ಮಧುಮಕ್ಕಳ ಮೆರವಣಿಗೆ, ಬ್ಯಾಂಡ್‍ಸೆಟ್, ದೇಶದ ವಿವಿಧ ಬುಡಕಟ್ಟುಗಳ ಮಾದರಿ, ದೇವಾಲಯ…. ಹೀಗೆ ಹಲವು ಬಗೆಯ ಬೊಂಬೆಗಳನ್ನು ಇಲ್ಲಿನ ವಿಶ್ವ ಪ್ರಸಿದ್ಧ ಜಾನಪದ ಲೋಕದಲ್ಲಿ ಅನಾವರಣಗೊಳಿಸಲಾಗಿದೆ.

ಇವೇ ಅಲ್ಲದೆ ಲವಕುಶ, ರಾಮಲಕ್ಷ್ಮಣ, ವಿಶ್ವಾಮಿತ್ರ, ಅಹಲ್ಯಾ ಶಾಪ ವಿಮೋಚನೆ, ಆಶ್ರಮದಲ್ಲಿ ಸೀತಾದೇವಿ, ಗೋವರ್ಧನಗಿರಿ ಎತ್ತಿದ ಕೃಷ್ಣ ಮತ್ತು ಪರಿವಾರ, ರಾಮನ ಪಟ್ಟಾಭಿಷೇಕ, ಕರಗ, ನವಿಲಿನ ಮೇಲೆ ಸವಾರಿ ಮಾಡುತ್ತಿರುವ ಷಣ್ಮುಗ, ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳು, ಹಣ್ಣು ತರಕಾರಿ, ಮಂತ್ರಾಲಯದ ಗುರುಗಳು ಹೀಗೆ ನಾನಾ ಬಗೆಯ ಗೊಂಬೆಗಳು ಜನರನ್ನು ಆಕರ್ಷಿಸುವ ಜತೆಗೆ ಕತೆಗಳನ್ನು ಹೇಳುತ್ತಿವೆ.

ಜಾನಪದ ಸಂಸ್ಕೃತಿ ಮತ್ತು ಸೊಗಡನ್ನು ವಿಶ್ವಕ್ಕೆ ಸಾರುತ್ತಿರುವ ರಾಮನಗರದ ಜಾನಪದ ಲೋಕದಲ್ಲಿ ದಸರಾ ಗೊಂಬೆಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ರೇಷ್ಮೆನಗರಿ ನಾಡ ದಸರೆಗೆ ಜನಪದ ಸೊಗಡಿನ ಸಾಂಪ್ರದಾಯಿಕ ಕಳೆಕಟ್ಟಿದೆ. ಮಾಯಾಲೋಕದಲ್ಲಿ ಪಟ್ಟದ ಗೊಂಬೆಗಳಿಗೆ ಅಗ್ರಸ್ಥಾನವಿದ್ದು, ಸೆರಾಮಿಕ್, ಮಣ್ಣು, ಪಿಂಗಾಣಿ ಮತ್ತು ಮರದ ಬೊಂಬೆಗಳಿಗೆ ಪ್ರದರ್ಶನದಲ್ಲಿ ಆಧ್ಯತೆ ನೀಡಲಾಗಿದ್ದು ಪ್ಲಾಸ್ಟಿಕ್ ಆಟಿಕೆಗಳಿಗೆ ನಿಷೇಧ ಹೇರುವ ಮೂಲಕ ಜಾನಪದ ಲೋಕ ದೇಶಿಕಲಾ ಸಾಂಸ್ಕೃತಿಕ ಕೇಂದ್ರವೆಂಬುದನ್ನು ಸಾಕ್ಷೀಕರಿಸಿದೆ.

ಧಾರ್ಮಿಕ, ಸಾಮಾಜಿಕ, ಐತಿಹಾಸಿಕ ಜತೆಗೆ ಸಾಂದರ್ಭಿಕ ಅಂಶಗಳನ್ನು ಬೊಂಬೆಗಳಲ್ಲಿ ವ್ಯಕ್ತಪಡಿಸಲಾಗಿದ್ದು, ಇಡೀ ಕುಟುಂಬವನ್ನು ಮನರಂಜಿಸುವುದರೊಂದಿಗೆ ಮರೆಯಾಗುತ್ತಿರುವ ನೈತಿಕ ಮೌಲ್ಯ ಮತ್ತು ದೇಶ ಪ್ರೇಮವನ್ನು ಪುನಶ್ಚೇತನಗೊಳಿಸುವ ನಿಟ್ಟಿಲ್ಲಿ ದಸರಾ ಗೊಂಬೆ ಹಬ್ಬವನ್ನು ಪ್ರಸ್ತುತ ಪಡಿಸಲಾಗಿದೆ.

ಮರದಿಂದ ಮಾಡಿರುವ ತೇರು, ವಾಹನಗಳಾದ ಬಸ್, ರೋಡ್‍ರೋಲರ್, ರೈಲು, ಎತ್ತಿನಗಾಡಿ, ಕುದುರೆಗಾಡಿ, ಏತ ನೀರಾವರಿ ಪದ್ಧತಿಯ ಮೂಲಕ ನೀರನ್ನು ಎತ್ತುವುದು, ಮಗವನ್ನು ತೂಗುವ ತೊಟ್ಟಿಲು ಮತ್ತಿತರ ವಸ್ತುಗಳು ಪ್ರದರ್ಶನದಲ್ಲಿ ನೋಡುಗರ ಗಮನ ಸೆಳೆಯುತ್ತಿವೆ. ಗೊಂಬೆಗಳ ಪ್ರದರ್ಶನವು ನವೆಂಬರ್ 10ರವರೆಗೆ ಇರಲಿದೆ.

ಜಾನಪದ ಲೋಕವು ದಿನೇ ದಿನೇ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಂಡು, ಜಾನಪದ ಕ್ಷೇತ್ರಕ್ಕೆ ಗಣನೀಯ ಕೊಡುಗೆಗಳನ್ನು ನೀಡುತ್ತಾ ಸಾಗುತ್ತಿದೆ. ಜಾಗತಿಕ ಪ್ರಪಂಚದಲ್ಲಿ ಮರೆಯಾಗುತ್ತಿರುವ ದೇಶಿಕಲೆ ಮತ್ತು ಸಂಸ್ಕೃತಿಯನ್ನು ದಸರಾ ಹಬ್ಬದ ಅಂಗವಾಗಿ ಪುನಶ್ಚೇತನಗೊಳಿಸಲು ಗೊಂಬೆಹಬ್ಬ ಪೂರಕವಾಗಿದೆ, ಅಲ್ಲದೇ ಹೊಸ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಗೊಂಬೆ ಪ್ರದರ್ಶನ ಸಹಕಾರಿಯಾಗಲಿದೆ ಎಂದು ಜಾನಪದ ಲೋಕದ ಕಾರ್ಯನಿರ್ವಾಹಣಾಧಿಕಾರಿ ಸರಸವಾಣಿ ತಿಳಿಸಿದರು.

Must Read