ಹೊಸದಿಗಂತ ವರದಿ ಹುಬ್ಬಳ್ಳಿ:
ಕಬ್ಬಿಗೆ ಸೂಕ್ತ ಬೆಲೆಗೆ ಆಗ್ರಹಿಸಿ ರೈತರು ನ್ಯಾಯುತವಾದ ಹೋರಾಟ ನಡೆಸಿದ್ದಾರೆ. ಕೇಂದ್ರ ಸರ್ಕಾರ ತಕ್ಷಣ ರೈತರ ಬೇಡಿಕೆ ಈಡೇರಿಸಬೇಕು. ರೈತರನಿಂದ ಈ ದೇಶ ನಿಂತಿದೆ. ಆದ್ದರಿಂದ ಮಠಾಧೀಶರು, ಸಾಹಿತಿಗಳು, ಕಲಾವಿದರು ಹಾಗೂ ಸಿನಿಮಾದವರು ರೈತರ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಶಿರಹಟ್ಟಿ ಮಠದ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಡೆ ಬರಗಾಲದಿಂದ ದೇಶ ತತ್ತರಿಸುತ್ತಿದ್ದು ಇನ್ನೊಂದು ಕಡೆ ರೈತರು ಬೆಳೆಗೆ ಸೂಕ್ತ ಬೆಲೆಯಿಲ್ಲ ಎಂದು ಹೋರಾಟ ಮಾಡುತ್ತಿದ್ದಾರೆ. ಮಾನವೀಯತೆ, ನಾಗರಿಕತೆ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.
ಪ್ರಧಾನಿ ಮೋದಿ ಅವರು ಇನ್ನಾದರೂ ರೈತರನ್ನು ಕಣ್ಣು ತೆರೆದು ನೋಡಬೇಕು. ಧೃತರಾಷ್ಟ್ರ ಆಗದೆ ಧರ್ಮರಾಯ ನಾಗಿ ರೈತರ ಕಣ್ಣೀರುವರೆಸಬೇಕು. ಈ ಭಾಗದ ಕೇಂದ್ರ ಸಚಿವರು ರೈತರ ಬೇಡಿಕೆ ಈಡೆರಿಸಲು ತಾಕತ್ತು ಇಲ್ಲವಾದರೆ ರಾಜೀನಾಮೆ ನೀಡಿ ಮನೆಗೆ ಬರಬೇಕು. ಅದನ್ನು ಬಿಟ್ಟು ಬೇರೆ ಕುತಂತ್ರ ಮಾಡಿದರೆ ಧಾರವಾಡಕ್ಕೆ ಕಾಲಿಡದಂತ ಪರಿಸ್ಥಿತಿ ನಿಮಗೆ ಬರಲಿದೆ ಎಂದು ಎಚ್ಚರಿಕೆ ನೀಡಿದರು.
ರೈತರ ನ್ಯಾಯುತ ಬೇಡಿಕೆ ಸಲುವಾಗಿ ನಾನು ಹೋರಾಟದಲ್ಲಿ ಭಾಗಿಯಾಗಿ ಸಹಕಾರ ನೀಡುತ್ತೇನೆ. ಎಲ್ಲಿವರೆಗೂ ರೈತರ ಬೇಡಿಕೆ ಈಡೇರುವುದಿಲ್ಲವೋ ಅಲ್ಲಿವರೆಗೆ ಸಿಹಿ ಪದಾರ್ಥಗಳನ್ನು ನಾನು ಮುಟ್ಟುವುದಿಲ್ಲ ಎಂದು ಶಪಥ ಮಾಡಿದರು.
ರಾಜ್ಯ ಸರ್ಕಾರ ಒಂದು ವರ್ಷ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಅದೇ ಹಣವನ್ನು ರೈತರಿಗೆ ಪರಿಹಾರ ನೀಡಬೇಕು. ಭಾರತ ಕೃಷಿ ಪ್ರಧಾನ ದೇಶ, ರೈತ ದೇಶದ ಬೆನ್ನೇಲಬು ಎಂಬ ಮಾತುಗಳ ಆಡುವ ರಾಜಕಾರಣಿಗಳು ರೈತರ ಕಷ್ಟದ ಬಗ್ಗೆ ಸ್ವಲ್ಪವಾದರೂ ಯೋಚಿಸಬೇಕು ಎಂದು ಆಗ್ರಹಿಸಿದರು.



