ಹೊಸದಿಗಂತ ವರದಿ ಹಾಸನ:
ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ವ್ಯಕ್ತಿಗಳ ಖಾಸಗಿ ಬದುಕಿನೊಳಗೆ ಪ್ರವೇಶಿಸಿ ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಾದ ಬೆಳವಣಿಗೆಯಲ್ಲ. ಇಂತಹ ಘಟನೆಗಳು ಸಾರ್ವಜನಿಕ ಬದುಕಿನ ಬಗ್ಗೆ ಜನರಿಗೆ ಕೆಟ್ಟ ಸಂದೇಶ ನೀಡುತ್ತವೆ ಎಂದು ಮಾಜಿ ಸಚಿವ ಎಂ.ಸಿ. ಸುಧಾಕರ್ ಅಭಿಪ್ರಾಯಪಟ್ಟರು.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದರು.
ತಾವು ರಾಜಕೀಯಕ್ಕೆ ಬಂದು 22 ವರ್ಷಗಳಾಗಿದ್ದು, ಈ ರೀತಿಯ ಹಲವು ಪರಿಸ್ಥಿತಿ ಹಾಗೂ ಸಂದರ್ಭಗಳನ್ನು ನೋಡಿದ್ದೇನೆ. ಆದರೆ, ಸಾರ್ವಜನಿಕ ಜೀವನದಲ್ಲಿರುವವರ ಖಾಸಗಿ ಬದುಕಿನ ಬಗ್ಗೆ ಈ ರೀತಿಯಾಗಿ ಅತಿಕ್ರಮಣ ಮಾಡುವುದು ಒಳ್ಳೆಯ ವಾತಾವರಣವಲ್ಲ ಎಂದರು.
ಈ ವಿಚಾರದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ವೈಯಕ್ತಿಕ ಬದುಕಿನಲ್ಲಿ ಪ್ರವೇಶಿಸಿ ತೇಜೋವಧೆ ಮಾಡುವಂತಹ ಬೆಳವಣಿಗೆಗಳು ಸೂಕ್ತವಲ್ಲ. ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ನಡೆಯುವುದು ಒಳ್ಳೆಯದಲ್ಲ ಎಂದು ತಿಳಿಸಿದರು.
ಶಾಸಕ ಪ್ರದೀಪ್ ಈಶ್ವರ್ ಅವರೊಂದಿಗಿನ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಪಕ್ಷದ ಆಂತರಿಕ ವಿಚಾರಗಳೆಲ್ಲ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನದಲ್ಲಿವೆ. ಪಕ್ಷದ ನಾಯಕರು ಈ ವಿಚಾರವನ್ನು ಬಗೆಹರಿಸಲಿದ್ದಾರೆ ಎಂದರು.



