ಹೊಸದಿಗಂತ ವರದಿ ಹಾಸನ:
ಜಮೀನು ಮಾರಾಟದ ವಿಚಾರವಾಗಿ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಯುವ ಕೃಷಿಕನನ್ನು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನ ತಾಲ್ಲೂಕಿನ ರಾಮದೇವರಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪೃಥ್ವಿ (26) ಕೊಲೆಯಾದ ಯುವಕ. ವಿವಾಹಿತನಾಗಿದ್ದ ಪೃಥ್ವಿ ಇಬ್ಬರು ಮಕ್ಕಳನ್ನು ಹೊಂದಿದ್ದು, ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಪೃಥ್ವಿ ತಮ್ಮ ಜಮೀನನ್ನು ಸಂತೋಷ್ ಅಲಿಯಾಸ್ ಮೊಟ್ಟೆ ಸಂತೋಷ್ ಎಂಬುವವರಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಈ ನಡುವೆ ಸಂತೋಷ್, ಸದರಿ ಜಮೀನನ್ನು ದಾಸರಕೊಪ್ಪಲಿನ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡುವುದಾಗಿ ಹೇಳಿ ಮುಂಗಡ ಹಣ ಪಡೆದಿದ್ದರು ಎನ್ನಲಾಗಿದೆ. ಆದರೆ, ಇತ್ತೀಚೆಗೆ ಜಮೀನು ಮಾರಾಟ ಮಾಡಲು ಪೃಥ್ವಿ ನಿರಾಕರಿಸಿದ್ದರು. ಅಲ್ಲದೆ, ತಾವೇ ಜಮೀನನ್ನು ಖರೀದಿಸುವುದಾಗಿ ತಿಳಿಸಿ, ಬೆಲೆ ಎಷ್ಟು ಎಂದು ಹೇಳುವಂತೆ ಕೇಳಿದ್ದರು ಎನ್ನಲಾಗಿದೆ.
ಸೇಲ್ ಅಗ್ರಿಮೆಂಟ್ ಪ್ರಕಾರ ಜಮೀನು ಮಾರಾಟ ಮಾಡಲೇಬೇಕು ಎಂದು ಸಂತೋಷ್ ಪಟ್ಟು ಹಿಡಿದಿದ್ದರೆ, ಜಮೀನು ಮಾರಾಟ ಮಾಡುವುದಿಲ್ಲ ಎಂದು ಪೃಥ್ವಿ ಹೇಳಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಉಂಟಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಾತುಕತೆ ನೆಪದಲ್ಲಿ ಕರೆ : ಈ ವಿವಾದದ ಹಿನ್ನೆಲೆಯಲ್ಲಿ ಸಂತೋಷ್ ನಿನ್ನೆ ಪೃಥ್ವಿಗೆ ದೂರವಾಣಿ ಕರೆ ಮಾಡಿ, ಜಮೀನಿನ ಬಳಿ ಬಂದು ಮಾತುಕತೆ ನಡೆಸೋಣ ಎಂದು ಕರೆದಿದ್ದ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಪೃಥ್ವಿ, ತಮಗೆ ಮದ್ರಾಸ್ ಐ ಆಗಿರುವುದರಿಂದ ಊರಿಗೆ ಬರುವಂತೆ ತಿಳಿಸಿದ್ದರು ಎನ್ನಲಾಗಿದೆ. ಪೃಥ್ವಿ ತಮ್ಮ ಜಮೀನಿನಲ್ಲಿ ಬೀನ್ಸ್ ಬೆಳೆದಿದ್ದು, ಕಟಾವು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ನಿನ್ನೆ ಸಂಜೆ ಹಾಲು ಕರಿದು, ಜಾನುವಾರುಗಳಿಗೆ ಮೇವು ಹಾಕಿದ ಬಳಿಕ ಟಾರ್ಪಲ್ ತರಲು ರಾತ್ರಿ ಬೈಕ್ನಲ್ಲಿ ಜಮೀನಿನ ಬಳಿ ತೆರಳಿದ್ದರು. ಈ ವೇಳೆ ಮಾರಕಾಸ್ತ್ರಗಳೊಂದಿಗೆ ಬಂದಿದ್ದ ದುಷ್ಕರ್ಮಿಗಳು ಪೃಥ್ವಿ ಮೇಲೆ ದಾಳಿ ನಡೆಸಿ, ಮನಬಂದಂತೆ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮೊಬೈಲ್, ಬೈಕ್ ಸಮೇತ ಆರೋಪಿಗಳು ಪರಾರಿ: ಪೃಥ್ವಿಯನ್ನು ಹತ್ಯೆಗೈದ ಬಳಿಕ ಆರೋಪಿಗಳು ಅವರ ಮೊಬೈಲ್ ಫೋನ್ ಹಾಗೂ ಬೈಕ್ ತೆಗೆದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸಂತೋಷ್ ಮತ್ತು ಆತನ ತಂದೆ ಪುಟ್ಟಸ್ವಾಮಿ ವಿರುದ್ಧ ಪೃಥ್ವಿ ಕುಟುಂಬಸ್ಥರು ಆರೋಪ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.



