October 14, 2026
Wednesday, October 14, 2026
spot_img

ನೇಲ್ ಕಟರ್ ನುಂಗಿ ಪ್ರಾಣಾಪಾಯದಲ್ಲಿದ್ದ ಯುವಕನಿಗೆ ಮರುಜನ್ಮ ನೀಡಿದ ಬಿಮ್ಸ್ ಆಸ್ಪತ್ರೆಯ ವೈದ್ಯರು

ಹೊಸದಿಗಂತ ವರದಿ ಬೆಳಗಾವಿ:

ಯುವಕನೊಬ್ಬನ ಹೊಟ್ಟೆಯಲ್ಲಿದ್ದ ನೇಲ್ ಕಟರ್ ಅನ್ನು ಎಂಡೋಸ್ಕೋಪಿ ವಿಧಾನದ ಮೂಲಕ ಹೊರತೆಗೆದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. 20 ವರ್ಷದ ಯುವಕನಿಗೆ ಸೂಕ್ತ ಚಿಕಿತ್ಸೆ ನೀಡಿ ಆರೋಗ್ಯವಂತನನ್ನಾಗಿ ಮನೆಗೆ ಕಳುಹಿಸಿರುವುದು ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸೇವೆಗೆ ಸಾಕ್ಷಿಯಾಗಿದೆ.

ಬೆಳಗಾವಿಯ ಯುವಕನೊಬ್ಬ ನೇಲ್ ಕಟರ್ ನುಂಗಿದ್ದರಿಂದ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ಹೊಟ್ಟೆಯಲ್ಲಿದ್ದ ಅಪಾಯಕಾರಿ ವಸ್ತುವನ್ನು ಹೊರತೆಗೆಯುವುದು ವೈದ್ಯಕೀಯವಾಗಿ ಸವಾಲಿನ ಕೆಲಸವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಮ್ಸ್ ನ ವೈದ್ಯರಾದ ಡಾ. ಗಣೇಶ ಕೊಪ್ಪದ, ಹಿರಿಯ ಗ್ಯಾಸ್ಟ್ರೋಎಂಟರಾಲಜಿ ತಂತ್ರಜ್ಞ ದೀಪಕ್ ಕೆಂಗೇರಿ ಸೇರಿದಂತೆ ವೈದ್ಯಕೀಯ ತಂಡವು ಎಂಡೋಸ್ಕೋಪಿ ಮೂಲಕ ನೇಲ್ ಕಟರ್ ಅನ್ನು ಯಶಸ್ವಿಯಾಗಿ ಹೊರತೆಗೆದಿದೆ. ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಆರೈಕೆ ಮಾಡಿದ ಬಳಿಕ ಯುವಕನನ್ನು ಬಿಡುಗಡೆ ಮಾಡಲಾಗಿದ್ದು, ಸದ್ಯ ಆರೋಗ್ಯವಾಗಿದ್ದಾನೆ.

ವರ್ಷದಲ್ಲಿ 800 ಎಂಡೋಸ್ಕೋಪಿ ಚಿಕಿತ್ಸೆ:

ಬಿಮ್ಸ್ ಆಸ್ಪತ್ರೆಯ ಎಂಡೋಸ್ಕೋಪಿ ವಿಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 800 ಎಂಡೋಸ್ಕೋಪಿ ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಇವುಗಳಲ್ಲಿ 50 ಇ.ಆರ್.ಸಿ.ಪಿ. ಪ್ರಕ್ರಿಯೆಗಳು ಸೇರಿವೆ. ಅಲ್ಲದೆ, ಇ.ವಿ.ಎಲ್ ಜೀರ್ಣಾಂಗದ ಕಿರಿದಾದ ಭಾಗವನ್ನು ವಿಸ್ತರಿಸುವ ಡೈಲೇಟೇಶನ್ ಹಾಗೂ ರಕ್ತನಾಳಗಳ ಉಬ್ಬುವಿಕೆಗೆ ಸಂಬಂಧಿಸಿದ ಚಿಕಿತ್ಸೆಗಳನ್ನು ನೀಡಲಾಗಿದೆ. ಜೀರ್ಣಾಂಗ ವ್ಯವಸ್ಥೆಯ ವಿವಿಧ ಕಾಯಿಲೆಗಳ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಈ ವಿಧಾನಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ನೇಲ್ ಕಟರ್ನಂತಹ ಅಪಾಯಕಾರಿ ವಸ್ತುವನ್ನು ಶಸ್ತ್ರಚಿಕಿತ್ಸೆಯ ಬದಲಾಗಿ ಎಂಡೋಸ್ಕೋಪಿ ಮೂಲಕ ಹೊರತೆಗೆದಿರುವುದು ವೈದ್ಯಕೀಯ ತಂಡದ ಪರಿಣತಿಯನ್ನು ತೋರಿಸಿದೆ. ಸರ್ಕಾರಿ ಆಸ್ಪತ್ರೆಯಲ್ಲಿಯೂ ಆಧುನಿಕ ತಂತ್ರಜ್ಞಾನ ಮತ್ತು ತಜ್ಞ ವೈದ್ಯರ ನೆರವಿನಿಂದ ಗುಣಮಟ್ಟದ ಚಿಕಿತ್ಸೆ ಒದಗಿಸಲು ಸಾಧ್ಯ ಎಂಬುದಕ್ಕೆ ಈ ಕಾರ್ಯಾಚರಣೆ ಉದಾಹರಣೆಯಾಗಿದೆ.

ಇದನ್ನೂ ಓದಿ:

ವೈದ್ಯಕೀಯ ತಂಡಕ್ಕೆ ಅಭಿನಂದನೆ:

ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ, ಮುಖ್ಯ ಆಡಳಿತಾಧಿಕಾರಿ ರೇಷ್ಮಾ ತಾಳಿಕೋಟಿ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಜಗದೀಶ ಗಾಣಗಿ ಅವರು ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ವೈದ್ಯರು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

“ಬೆಳಗಾವಿ ಬಿಮ್ಸ್ ಕರ್ನಾಟಕದ ಜನರಷ್ಟೇ ಅಲ್ಲದೆ ಮಹಾರಾಷ್ಟ್ರ ಮತ್ತು ಗೋವಾ ಗಡಿಭಾಗದ ಬಡ ಜನರಿಗೂ ಆರೋಗ್ಯ ಸೇವೆ ಒದಗಿಸುತ್ತಿದೆ. ಜನರ ಆರೋಗ್ಯ ಮತ್ತು ಕಾಳಜಿ ಸಂಸ್ಥೆಯ ದೃಢಸಂಕಲ್ಪವಾಗಿದ್ದು, ಗುಣಮಟ್ಟದ ಚಿಕಿತ್ಸೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸೇವೆ ಸಲ್ಲಿಸಲು ಆಡಳಿತ ಮಂಡಳಿ ಹಾಗೂ ವೈದ್ಯಕೀಯ ತಂಡ ಸದಾ ಸಿದ್ಧವಾಗಿದೆ” ಎಂದು ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.

Must Read