ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಮುಂಗಾರು ಮಳೆಯ ವೈಫಲ್ಯ ಮತ್ತು ಕೃಷಿ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ,ರಾಜ್ಯ ಸರ್ಕಾರವು ಹೊಸದಾಗಿ 9 ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿದ್ದು, ಇದರೊಂದಿಗೆ ರಾಜ್ಯದ ಒಟ್ಟು ಬರಪೀಡಿತ ತಾಲ್ಲೂಕುಗಳ ಸಂಖ್ಯೆ 226 ಕ್ಕೆ ತಲುಪಿದೆ.
ಈ ಹಿಂದೆ ಸರ್ಕಾರವು 217 ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಪ್ರಕಟಿಸಿತ್ತು. ಆದರೆ ತಳಮಟ್ಟದ ಕೃಷಿ ಪರಿಸ್ಥಿತಿ ಕ್ಷೀಣಿಸುತ್ತಿರುವ ಕಾರಣ ಪಟ್ಟಿಯನ್ನು ವಿಸ್ತರಿಸಲಾಗಿದೆ.
ಸಕಲೇಶಪುರ ‘ತೀವ್ರ ಬರಪೀಡಿತ’ ವಲಯ
ಕಂದಾಯ ಇಲಾಖೆಯ ಉನ್ನತ ಮಟ್ಟದ ವೈಜ್ಞಾನಿಕ ಮೌಲ್ಯಮಾಪನದ ಪ್ರಕಾರ, ನೂತನವಾಗಿ ಸೇರ್ಪಡೆಗೊಂಡಿರುವ 9 ತಾಲ್ಲೂಕುಗಳ ಪೈಕಿ 8 ತಾಲ್ಲೂಕುಗಳನ್ನು ‘ಮಧ್ಯಮ ಬರಪೀಡಿತ’ ಎಂದು ಗುರುತಿಸಲಾಗಿದೆ. ಆದರೆ ಮಲೆನಾಡಿನ ಪ್ರಮುಖ ಕೃಷಿ ಭಾಗವಾಗಿರುವ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕನ್ನು ‘ತೀವ್ರ ಬರಪೀಡಿತ’ ವಲಯ ಎಂದು ಸರ್ಕಾರ ಪ್ರಕಟಿಸಿದೆ.
ಹೊಸದಾಗಿ ಸೇರ್ಪಡೆಯಾದ ತಾಲ್ಲೂಕುಗಳು
ಮಳೆಯ ಕೊರತೆ ಹಾಗೂ ಕೃಷಿ ಹಾನಿಯ ಆಧಾರದ ಮೇಲೆ ಮಧ್ಯಮ ಬರಪೀಡಿತ ಪಟ್ಟಿಗೆ ಸೇರಿದ ಪ್ರಮುಖ ತಾಲ್ಲೂಕುಗಳೆಂದರೆ, ಬೆಳಗಾವಿ ಜಿಲ್ಲೆಯ ಖಾನಾಪುರ, ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ಸಾಗರ ತಾಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮೂಡುಬಿದಿರೆ ಮತ್ತು ಮೂಲ್ಕಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಮತ್ತು ದಾಂಡೇಲಿ ತಾಲೂಕುಗಳನ್ನೂ ಮಧ್ಯಮ ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ.
ಇದನ್ನೂ ಓದಿ:
ಮುಂದಿನ ದಿನಗಳಲ್ಲಿ ಮತ್ತಷ್ಟು ತಾಲ್ಲೂಕು ಸೇರ್ಪಡೆ ಸಾಧ್ಯತೆ
ಇನ್ನುಳಿದ ತಾಲ್ಲೂಕುಗಳ ಮೇಲೂ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದ್ದು ಮಾನದಂಡಗಳಿಗೆ ಒಳಪಟ್ಟಲ್ಲಿ ಮುಂದಿನ ಹಂತದಲ್ಲಿ ಹೆಚ್ಚುವರಿ ತಾಲ್ಲೂಕುಗಳನ್ನು ಸೇರಿಸಲಾಗುವುದು ಮತ್ತು ಬರದ ಬೇಗೆಯಿಂದ ರೈತರ ಜೀವನೋಪಾಯಕ್ಕೆ ತೊಂದರೆಯಾಗದಂತೆ ತಡೆದು, ಬೆಳೆಹಾನಿಗೆ ಸೂಕ್ತ ಆರ್ಥಿಕ ಪರಿಹಾರ ಒದಗಿಸಿ ಗ್ರಾಮೀಣ ಜನರ ಹಿತ ಕಾಯುವುದೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.



